ರೈತ - ಭಾರತ

ನಗರಗಳಲ್ಲಿ ವಾಸಿಸುವವರು ಮಾತ್ರ ನಾಗರಿಕರು, ಗ್ರಾಮೀಣ ಭಾಗದಲ್ಲಿ ವಾಸಿಸುವವರು ಅನಾಗರಿಕರೇನೋ ಎಂಬ ಭಾವ ಮೂಡಿಸುವಂತೆ ಮಾಧ್ಯಮ ಹಾಗೂ ಸರ್ಕಾರದ ನಡೆಗಳು ತೋರುತ್ತವೆ. ಪ್ರತೀ ಬಾರಿಯ ಬಜೆಟ್ ಅಥವಾ ಯಾವುದೇ ಯೋಜನೆಗಳಲ್ಲಾದರೂ ಬೆಂಗಳೂರಿಗಿಷ್ಟು, ಬೆಳಗಾವಿಗಿಷ್ಟು ಎಂಬ ಯೋಜನೆ ಕೇಳಿದ್ದೇವೆಯೇ ಹೊರತು ಆ ಹಳ್ಳಿಗಿಷ್ಟು ಈ ಹಳ್ಳಿಗಿಷ್ಟು ಎಂದು ಎಲ್ಲೂ ಕೇಳೋಲ್ಲ. ಪ್ರತಿ ಬಾರಿಯೂ ರೈತನನ್ನು ಮುಂದಿಟ್ಟುಕೊಂಡು ಕಣ್ಣೊರೆಸುವ ನಾಟಕವನ್ನು ಎಲ್ಲಾ ಪಕ್ಷಗಳು ಮಾಡಿಯೇ ತೀರುತ್ತವೆ.

             ಭಯಾನಕ ಬರಗಾಲದ ಸಮಯದಲ್ಲೂ ನಗರಗಳಿಗೆ ನೀರೊದಗಿಸಲು ಸರಕಾರಗಳು ಮುಂದಾಗುತ್ತವೆಯೇ ಹೊರತು ಹಳ್ಳಿಗರ ಗೋಳು ಎಂದಿಗೂ ಕೇಳಲಾರವು. ಕೃಷಿಯೇ ಮುಖ್ಯ ಉದ್ದೇಶವಾಗಿ ನಿರ್ಮಿಸಿದ ಆಣೆಕಟ್ಟೆ-ಕೆರೆ ಗಳು ಈಗ ನಗರಗಳಿಗೆ ನೀರು ಸರಬರಾಜು ಮಾಡುವ ಆಗರಗಳಾಗಿವೆ. ರಾಸುಗಳಿಗೆ ಮೇವಿಲ್ಲದೇ, ಇತ್ತ ಬೆಳೆಯೂ ಇಲ್ಲದೇ, ಬೆಳೆಸಾಲ - ಕುಡಿವ ನೀರಿಗೂ ಹಾಹಾಕಾರವಾಗಿ ಹಳ್ಳಿ ತೊರೆದು ರೈತ ಗುಳೇ ಹೊರಟಿದ್ದಾನೆ. ಆತ್ಮಹತ್ಯೆಯ ದಾರಿಯನ್ನೂ ಹಿಡಿದಿದ್ದಾನೆ. ಇದೆಲ್ಲದರ ಮೇಲೂ ಸರಕಾರಗಳಿಗೆ ಜಾಗತಿಕ ಮಟ್ಟದಲ್ಲಿ ತಮ್ಮ ಮಹಾನಗರಗಳ ಹೆಸರು ಕಾಣಲು ಉತ್ಸಾಹ. ಸಾಯುವವರು ಸತ್ತರೆ ನಮಗೇನು ನಷ್ಟ ಎಂಬಂತೆ ಅವರ ಭಾವ.




             ಇದನ್ನೇ ನೋಡುತ್ತಾ ಬೆಳೆಯುವ ಯುವ ಜನತೆ ಮುಂದೊಂದು ದಿನ ಊರ ಬಾಗಿಲು ಮುಚ್ಚಿ ನಗರ ಸೇರಿದರೆ ಅಚ್ಚರಿಯೇನಿಲ್ಲ.  ಎಲ್ಲರನ್ನೂ ತುಂಬಿಸಿಕೊಳ್ಳುವ ನಗರಗಳ ಗತಿಯೇನು.  ಅಭಿವೃದ್ಧಿಯ ನೆಪದಲ್ಲಿ ಸಾಮಾಜಿಕ ದಿವಾಳಿಯಂತೂ ಸತ್ಯ. ಹೇಳಿಕೆಗಷ್ಟೇ ಸೀಮಿತವಾದ ದೇಶದ ಬೆನ್ನೆಲುಬು, ರೈತನ ಕಾಯಕವನ್ನು ಮುಂದುವರೆಸುವವರಾರು ?! ಕೃಷಿಯಿಲ್ಲದೇ ಎಷ್ಟು ದಿನ ಏನನ್ನು ತಿಂದಾರು ?!

             ಸರಕಾರಗಳು ಅಭಿವೃದ್ಧಿ ನೆಪದಲ್ಲಿ ರೈತನಿಗಾಗುತ್ತಿರುವ ಅನ್ಯಾಯಗಳನ್ನು ಮೊದಲು ತಡೆಯಬೇಕು. ಅದು ಅಮೆರಿಕ ಅಧ್ಯಕ್ಷರೇ ಆಗಿರಲಿ, ಆ್ಯಪಲ್-ಮೈಕ್ರೊಸಾಫ್ಟ್-ಬೇಕಾದ ಐಟಿ ಬಿಟಿಯೇ ಆಗಿರಲಿ, ಅದೆಲ್ಲಾ ರೈತನ ನಂತರದ ಸ್ಥಾನದಲ್ಲಿರಬೇಕು. ದೇಶ - ದೇಶದ ಸಂಸ್ಕೃತಿ - ಸಂಪತ್ತು ಉಳಿಯಬೇಕಾದರೆ ಮೊದಲು ರೈತ ಸಂಪನ್ನನಾಗಬೇಕು. "ರೈತ ನಕ್ಕರೆ ದೇಶ ಬೆಳೆಯುತ್ತದೆ - ರೈತ ಅತ್ತರೆ ದೇಶ ಸಾಯುತ್ತದೆ" ಎಂಬುದನ್ನು ಸರ್ವರೂ ಮನದಟ್ಟು ಮಾಡಿಕೊಳ್ಳಬೇಕು. ಅದೇ ಮೂಲ ಮಂತ್ರವಾಗಬೇಕು.

Read this article in English: Click here

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ

ಒಂದು ಅಲಾರಾಂನ ಕಥೆ