ಭಾರತ - ಕನ್ನಡ

೧೮೫೭ ರಲ್ಲಿ ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮ ಪ್ರಾರಂಭ ಆಯ್ತು. ಇದಾದ ನಂತರ ಅನೇಕ ಚಳುವಳಿಗಳು, ದಂಗೆಗಳು ನಡೆದು ಹೋದುವು. ಅಸಂಖ್ಯ ಹೊರಟಗಾರರು ನಡೆಸಿದ ಅವಿರತ ಪ್ರಯತ್ನದ ಫಲವಾಗಿ ೧೯೪೭ ರಲ್ಲಿ ನಮಗೆ ಸ್ವಾತಂತ್ರ್ಯ ಸಿಕ್ತು. ಆದರೂ ಅಖಂಡ ಭಾರತದ ಕನಸು ಕನಸಾಗಿಯೇ ಉಳಿಯುವಂತಾಯ್ತು. ಇನ್ನು  ಸಂವಿಧಾನ ಅಸ್ತಿತ್ವಕ್ಕೆ ಬಂದದ್ದು ೧೯೫೦ ರಲ್ಲಿ. ಭಾಷಾವಾರು ಪ್ರಾಂತ್ಯಗಳ ರಚನೆ ಆಗಿದ್ದು ೧೯೫೬ ರಲ್ಲಿ.

               ಇದೇ ರೀತಿ ಕನ್ನಡ ಭಾಷೆ, ಸುತ್ತಲಿನ ವಾತಾವರಣ ಹಾಗೂ ಅನೇಕ ನಿರ್ದಿಷ್ಟ ಕಾರಣಗಳೊಂದಿಗೆ ಅನೇಕರ ಹೋರಾಟದ ಫಲವಾಗಿ ಮೈಸೂರು ರಾಜ್ಯ ಉಗಮವಾಯಿತು, ಕಾಲಾಂತರದಲ್ಲಿ ಇದು ಕರ್ನಾಟಕ ರಾಜ್ಯವೂ ಆಯ್ತು. ಕನ್ನಡ ಈಗ ಭಾರತದ ಶಾಸ್ತ್ರೀಯ ಭಾಷೆಗಳಲ್ಲಿ ಒಂದು. ಸುಮಾರು ೧೭೦೦ ವರ್ಷಗಳಿಗೂ ಹಳೆಯ ಇತಿಹಾಸ ಹೊಂದಿರುವ ಭಾಷೆ. ತನ್ನ ಸಾಹಿತ್ಯವನ್ನು ವಿವಿಧ ಪ್ರಕಾರಗಳಲ್ಲಿ ಸಂಪನ್ನವಾಗಿಸಿಕೊಂಡಿದೆ.

                  ೧೯೪೭ ಕ್ಕಿಂತ ಹಿಂದೆ ತಮ್ಮ ದೇಶ ಯಾವುದು ಎಂಬುದಕ್ಕೆ ಉತ್ತರಗಳೇ ಬೇರೆ ಇದ್ದವೋ ಏನೋ.!
ಆದರೆ ಬ್ರಿಟಿಷರು ತೊಲಗಿದ ನಂತರ ಇದು ತಾಯಿ ಭಾರತಾಂಬೆಯ ಆಸ್ಥಾನವಾಯಿತು. ಮೊದಲ ದಂಗೆಯಿಂದ ಇಲ್ಲಿಯವರೆಗೂ ಸುಮಾರು ೧೫೦ ವರ್ಷಗಳಾಗಿರಬಹುದು. ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ ನಮ್ಮ ದೇಶದ ಸಾರ ಏಕೋ ಕ್ರಮೇಣ ಬದಲಾಗುತ್ತಿರುವಂತೆ ತೋರುತ್ತಿದೆ. ಹಿಂದಿ ಬಹುಭಾಷಿಕರಿರುವ ನಮ್ಮ ದೇಶದಲ್ಲಿ, ಹಿಂದಿಯೇತರ ಭಾಷಾ ರಾಜ್ಯಗಳಲ್ಲಿ ಹಿಂದಿ ಹೇರಿಕೆ ಯಥೇಚ್ಛವಾಗಿ - ಹೇರಳವಾಗಿ ನಡೆಯುತ್ತಿದೆ. ಬ್ಯಾಂಕು - ಪೋಸ್ಟ್ ಆಫೀಸ್ - ರೈಲ್ವೇ ಇನ್ನೂ ಮುಂತಾದ ಕೇಂದ್ರ ಸರಕಾರೀ ಅಧೀನ ಸಂಸ್ಥೆಗಳಲ್ಲಿ ಅರಗದ ಭಾಷೆಯನ್ನು ತುರುಕಲಾಗುತ್ತಿದೆ. ಕೆಲವರು ಹಿಂದಿ ರಾಷ್ಟ್ರೀಯ ಭಾಷೆ ಎಂದು ಹೇಳುತ್ತಾ ಸಂವಿಧಾನಕ್ಕೇ ಮಸಿ ಬಳಿಯ ಹೊರಟಿದ್ದಾರೆ. ಇಂತಹ ಘಟನೆಗಳು ಪ್ರಾದೇಶಿಕ ಭಾಷಾ ಪ್ರೇಮಿಗಳನ್ನು ರೊಚ್ಚಿಗೆಬ್ಬಿಸಿವೆ.



ಚಂದನ ವಾಹಿನಿಯಲ್ಲಿ ಪ್ರಸಾರವಾದ ಲಿಪಿ ಅನುವಾದರಹಿತ ಕಾರ್ಯಕ್ರಮ

                ಇಷ್ಟೆಲ್ಲಾ ನೋಡುತ್ತಿರುವ ಒಬ್ಬ ಮಾತೃಭಾಷಾ ಪ್ರೇಮಿಯಾದ ನನಗೆ ಅನಿಸಿದ್ದು ಇಷ್ಟು,  ನಮ್ಮ ಸಂವಿಧಾನ ಅಸ್ತಿತ್ವಕ್ಕೆ  (ಭಾವನೆ) ಬಂದು ಸರಿಸುಮಾರು ೬೫-೭೦ ವರ್ಷ. ಅದೇ ರೀತಿ ರಾಜಕೀಯವಾಗಿ ಹಿಂದಿ ಭಾಷಾ ಬೆಳವಣಿಗೆ ಅಷ್ಟೇ ವರ್ಷಗಳು ಎಂದುಕೊಂಡರೂ ನಮ್ಮದೇ ಆದ ೨೦೦೦ ವರ್ಷಗಳಿಂದಲೂ ನಮ್ಮ ಉಸಿರಾಗಿರುವ ನಮ್ಮ ಭಾಷೆಯನ್ನು ಬಿಟ್ಟು ಬೇರೆ ಭಾಷೆಯನ್ನು ನಮ್ಮ ಭಾಷೆಯೆನ್ನಲು ನಾನು ತಯಾರಿಲ್ಲ. ಎಲ್ಲಾ ಭಾಷೆಗಳಿಗೂ ಸಮಾನ ಗೌರವ ನೀಡಿದರೂ ನನ್ನ ಭಾಷೆಗಿಂತ ಗುಲಗಂಜಿಯಷ್ಟೂ ಹೆಚ್ಚು ಪ್ರಾಮುಖ್ಯತೆ ಬೇರಾವ ಭಾಷೆಗೂ ನೀಡಲು ನಾನು ತಯಾರಿಲ್ಲ. ಹಿಂದಿ ಹೇರಿಕೆ ಸಹಿಸಲಾಗದ ಕೃತ್ಯ, ನನ್ನ ಪ್ರಕಾರ ಇದೊಂದು ದಬ್ಬಾಳಿಕೆ ಮತ್ತು ಅಸಾಂವಿಧಾನಿಕ. ಪ್ರಾದೇಶಿಕ ಭಾಷೆಗಳನ್ನು ಮಟ್ಟ ಹಾಕಲು ಕೇಂದ್ರ ಮಟ್ಟದಲ್ಲಿ ನಡೆಯುತ್ತಿರುವ ಹುನ್ನಾರ. ಇದಕ್ಕೆಲ್ಲಾ ಜಗ್ಗದವರು ನಾವು ಅಗೆದು ಬಗೆದು ದೋಚಿದರೂ ಶೂನ್ಯವಾಗದ ವಿಜಯನಗರದ ಸಂಪತ್ತೇ ನಮ್ಮ ಭಾಷೆ - ನಾಡನ್ನು ಪ್ರತಿನಿಧಿಸುತ್ತದೆ.

               ನಮ್ಮ ಜನ "ಮನೆಗೆ ಮಾರಿ - ಊರಿಗೆ ಉಪಕಾರಿ" ಎನ್ನಬಹುದಾದ ಧೋರಣೆಯನ್ನು ಬಿಡಬೇಕು.  ಮೊದಲು ಮನೆ ಗಟ್ಟಿಯಾಗಬೇಕು.  ತಾಲ್ಲೂಕು  > ಜಿಲ್ಲೆ > ನಾಡು, ಈ ರೀತಿಯಾಗಿ ಕನ್ನಡ ಬಲವರ್ಧನೆಯಾಗಬೇಕು.  ನಂತರ ಊರಿನ ಬೆಳವಣಿಗೆಗೆ ಕೈ ಜೋಡಿಸಬೇಕು. ಕರುನಾಡಿನಲ್ಲಿ ಇಂದೂ-ಮುಂದೂ-ಎಂದೆಂದೂ ಕನ್ನಡ ಸಾರ್ವಭೌಮ ಭಾಷೆಯಾಗಿರಬೇಕು. ಕನ್ನಡಿಗರು ಭಾಷಾ ಸ್ವಾಭಿಮಾನಿಗಳಾಗಬೇಕು. ಕನ್ನಡವನ್ನು ಬಳಸಿ-ಕಲಿಸಿ-ಉಳಿಸಿ-ಬೆಳೆಸಬೇಕು.

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ

ಒಂದು ಅಲಾರಾಂನ ಕಥೆ