ತೊಣ್ಣೂರು ಕೆರೆಯ ಗೆಳೆತನ
ಕಾಲೇಜು ಮುಗಿದ ಬಳಿಕ ಮೈಸೂರಿಗೆ ಹಿಂದಿರುಗಿದಾಗ, ಸುಂದರ ತಾಣ ತೊಣ್ಣೂರು ಕೆರೆಗೂ ಹೋಗುವ ಮನಸಾಯಿತು. ಹಿಂದೊಮ್ಮೆ ಗೆಳೆಯರ ಜೊತೆ ಹೋಗಿದ್ದು ಆ ಸ್ಥಳ ಹಾಗೂ ಅಲ್ಲಿಯ ಸೂರ್ಯಾಸ್ತಮಾನ ನನ್ನ ಮನಸೂರೆಗೊಂಡಿತ್ತು.
ಬೆಂಗಳೂರಿನಿಂದ ಬೆಳಗ್ಗೆ ನನ್ನ ಬೈಕ್ ನಲ್ಲೇ ಹೊರಟು ಮೈಸೂರು ತಲುಪಿದ್ದು ಮಧ್ಯಾಹ್ನದ ಹೊತ್ತಿಗೆ, ಕೆ.ಎಸ್.ಓ.ಯು ಹಾಸ್ಟೆಲ್ ನಲ್ಲಿ ತಂಗಲು ವ್ಯವಸ್ಥೆ ಆಗಿತ್ತು ಹೋಗಿ ವಿಶ್ರಾಂತಿ ತೆಗೆದುಕೊಂಡು ಸಂಜೆ ತೊಣ್ಣೂರು ಕೆರೆಗೆ ಹೋಗುವ ನಿರ್ಣಯ ಮಾಡಿದೆ. ನಿದ್ದೆಯಿಂದೆದ್ದು ಹೊರಡುವುದು ಸ್ವಲ್ಪ ಸಮಯವಾದ್ದರಿಂದ ಸೂರ್ಯಾಸ್ತದ ಸುಂದರ ಚಿತ್ರಣ ಸಿಗುವುದೋ ಇಲ್ಲವೋ ಎಂಬ ಭಯದಲ್ಲೇ ಹೊರಟೆ. ನಾನು ಅವತ್ತು ಬೈಕ್ ಓಡಿಸಿದ್ದು, ಮುಳುಗಲು ಹೋಗುತ್ತಿರುವ ಸೂರ್ಯನೊಂದಿಗೇ ರೇಸ್ ಹತ್ತಿದಂತಿತ್ತು.

ಅಂತೂ ತಡವಾಗದೇ ಸಮಯಕ್ಕೆ ಸರಿಯಾಗಿ ತಲುಪಿದ್ದಾಯಿತು, ಸೂರ್ಯಾಸ್ತ ದರ್ಶನಕ್ಕೆ ಅಡ್ಡಿಯಾಗುವಂತೆ ಮೋಡಗಳಿದ್ದರಿಂದ ಅಷ್ಟೇನು ಸುಂದರವಾಗಿ ಕಾಣುತ್ತಿರಲಿಲ್ಲ, ಇದಕ್ಕೆ ಹಿಂದೆ ನಾನು ನೋಡಿದ ಅಮೋಘ ಸೂರ್ಯಾಸ್ತಮಾನದ ಸ್ಮರಣೆಯೇ ಕಾರಣ ಎಂದರೆ ತಪ್ಪಲ್ಲ.
ಈ ಬಾರಿ ಅಲ್ಲೊಂದು ಸಿನೆಮಾ ಚಿತ್ರೀಕರಣ ನಡೆಯುತ್ತಿತ್ತು, ಆ ಗಿಜಿಗಿಜಿ ಯಲ್ಲಿ ಶಾಂತಿಯೆಲ್ಲಾ ಕಳೆದು ಹೋಗಿತ್ತು. ಯಾವುದೋ ಊರಿಂದ ಬಂದ ತರುಣರ ಗುಂಪೊಂದನ್ನು ಬಿಟ್ಟರೆ ಯಾಕೋ ಬೇರೆ ಯಾವ ಜನರೂ ಇರಲಿಲ್ಲ. ಚಿತ್ರೀಕರಣ ನೋಡುತ್ತಾ ಟೀ ಹೀರಿದ್ದಾಯಿತು. ಅಷ್ಟರಲ್ಲೇ ಸೂರ್ಯಾ ಮುಳುಗುತ್ತಾ ಹೊರಟ.
ಇತ್ತ ಬೆಳಕು ಕಮ್ಮಿಯಾಗುತ್ತಲೇ ಚಿತ್ರೀಕರಣ ತಂಡ ಗಂಟು ಕಟ್ಟಿ ಹೊರಟಿತು, ತರುಣರು ಕೆರೆ ಸುತ್ತುತ್ತಾ ಇನ್ನೊಂದು ಬದಿಯೆಡೆ ನಡೆದರು. ಎಲ್ಲವೂ ಸ್ತಬ್ಧವಾದಂತಾಗಿ ನೀರವ ಮೌನ ಆವರಿಸಿತು, ನಾನು ಕೆರೆಗಿದ್ದ ಮೆಟ್ಟಿಲುಗಳಲ್ಲಿ ಕೆಳಗಿಳಿಯುತ್ತಾ ಹೋಗಿ ನೀರ ಮುಂದೆ ಕುಳಿತೆ. ಮುಳುಗುತ್ತಿರುವ ಸೂರ್ಯ, ಕಪ್ಪು-ಬಿಳಿ ಮೋಡಗಳ ಸಾಲು, ಹಾರುತ್ತಿರುವ ಹಕ್ಕಿಗಳು, ಸುತ್ತಲೂ ಕಲ್ಲು ಬಂಡೆಗಳ ಬೆಟ್ಟ ಇವುಗಳ ನಡುವೆ ವಿಶಾಲವಾದ ಪ್ರಶಾಂತ ಕೆರೆ. ಕಾನನದ ಆನೆಯೊಂದರ ಮುಂದೆ ನಿಂತಾಗ ಆಗಬಹುದಾದ ಅನುಭವ ಉಂಟಾಯಿತು. ನನ್ನ ಮುಂದೆ ಬೃಹದಾಕಾರದ ಜೀವ ಒಂದು ಇರುವಂತೆ ಕೆರೆ ಭಾಸವಾಗುತ್ತಿತ್ತು. ಆದರೆ ಆ ಮೌನ ಅತೀತವಾಗಿದ್ದು ಸದ್ದಿಲ್ಲದಿದ್ದರೂ ಆ ಜೀವ ನನ್ನೊಂದಿಗೆ ಮಾತಾಡುವಂತಿತ್ತು, ಮನದಾಳದ ಆಹ್ಲಾದಕರ ಸಂಗತಿಗಳನ್ನು ಸ್ಮೃತಿಪಟಲಕ್ಕೆ ತಂದು ಸಂತಸ ಉಂಟುಮಾಡುತ್ತಿತ್ತು. ಅರಿವಿಲ್ಲದೇ ನಾನೂ ಅದರೊಂದಿಗೆ ಮಾತನಾಡುತ್ತಾ ಹೊರಟೆ...

ಸುಂದರ ಕ್ಷಣಗಳು ಬಹುಕಾಲ ಉಳಿಯವು ಅವು ಕ್ಷಣಿಕ ಎಂಬುದಷ್ಟು ಸತ್ಯ, ಕತ್ತಲಾದ ಕಾರಣ ನಾನು ಅಲ್ಲಿಂದ ಹೊರಡಬೇಕಾಯಿತು. ಆದರೆ ನಮ್ಮ ಸಂಭಾಷಣೆ ಮುಗಿದಿರಲಿಲ್ಲ. ಇನ್ನೂ ಹಂಚಿಕೊಳ್ಳಲು ಬಹಳವೇ ಉಳಿದಿತ್ತು, ಒಲ್ಲದ ಮನಸ್ಸಿನಿಂದಲೇ ಅಲ್ಲಿಂದ ಹೊರಟೆ, ಹಾಸ್ಟೆಲ್ ಗೆ ಬಂದು ತಂಗಿದೆ, ಮಾರನೇ ದಿನ ಬೆಟ್ಟಕ್ಕೆ ಹೋಗಿ ಅಲ್ಲಿಂದ ಬೆಂಗಳೂರಿಗೆ ಬರುವ ಯೋಜನೆ ನನ್ನದಾಗಿತ್ತು.
ಏಕೋ ಸೂರ್ಯಾಸ್ತಮಾನ ನೋಡಲು ಹೋದ ನಾನು, ನನ್ನ ಚಿತ್ತದ ಸುಂದರಾನುಭವಗಳನ್ನು ಹೊರತೆಗೆಯಬಲ್ಲ ಆತ್ಮೀಯ ಜೀವಿಯೊಂದನ್ನು ಕಂಡುಕೊಂಡೆ. ಸಾಧ್ಯವಾದರೆ ಮತ್ತೆ ಹೋಗುತ್ತೇನೆ, ಸೂರ್ಯನಿಗಾಗಿ ಅಲ್ಲ ಆ ಗೆಳೆತನಕ್ಕಾಗಿ.
Video link:
As always beautifully put up.
ReplyDeleteThank you 😊
Delete