ಮಡಕೆ ಮೂತಿಯವ ಬಂದು ಹೋದಾಗ.....



ಸೌಭಾಗ್ಯಪುರ ಅಂತ ಊರು, ಎಲ್ಲಾ ತಕ್ಕಮಟ್ಟಿಗೆ ಅನುಕೂಲಸ್ಥರೇ ಇದ್ರು. ಸುಮಾರು ಒಂದು ನೂರು ಮನೆಗಳಿದ್ವು. ಅದೇ ಊರವ್ರಂತೆ ಆದ್ರೆ ಒಂದ್ಹತ್ತು ಮನೆಗಳು ಊರಿಂದ ಸ್ವಲ್ಪ ದೂರದಲ್ಲಿ ಇದ್ವು. ರಾತ್ರಿ ಆದ್ರೆ ಊರಲ್ಲಿ ಬೀದಿನಾಟಕ, ಮುದುಕರ ಕಟ್ಟೆ, ಯುವಕರ ಗುಂಪು ಮನೆ ಮಾಡಿರ್ತಿದ್ವು. ಆದ್ರೆ ಅದ್ಯಾಕೋ ಊರಾಚೆಗಿದ್ದ ಮನೆಗಳು ಕತ್ತಲಾದ್ರೆ ತಟ್ಟನೆ ಮಾಯ ಆಗ್ತಾ ಇದ್ವು, ಏನೂ ಅಂತ ಗೊತ್ತಾಗ್ತಿರ್ಲಿಲ್ಲ.
                       ಹೀಗೆ ಇದ್ದಾಗ ರಾತ್ರಿ ಸುರಿದ ಮಳೆಗೆ, ಸೋಮಣ್ಣನ ಮನೆ ಹಿಂದಿನ ಬಚ್ಚಲುಮನೆಗೆ ಹೊಂದಿಕೊಂಡಿದ್ದ ಚರಂಡಿ ಕಟ್ಟಿಕೊಂಡಿತ್ತು. ಆ ನೀರಿನೊಂದಿಗೆ ಬಂದು ನಿಂತಿದ್ದ ಎಲ್ಲಾ ಹೊಲಸನ್ನು ಆತ ನೋಡದಾದ, ಬಚ್ಚಲಿಗೆ ಹೋಗುವುದನ್ನೇ ನಿಲ್ಲಿಸಿ ಎಲ್ಲದಕ್ಕೂ ಮನೆಯವರೆಲ್ಲಾ ಬಯಲಿನ ಹಾದಿ ಹಿಡಿದ್ರು.
                      ಅವತ್ತು ಬೆಳಿಗ್ಗೆ ಊರಿಂದ ಹೋದ ಸೋಮ ಇನ್ನು ಬಂದಿರಲಿಲ್ಲ. ಅಷ್ಟರಲ್ಲಿ ಯಾರೋ ಬಾರಿಸ್ತಿದ್ದ ಗಂಟೆ ಶಬ್ದ ಕೇಳ್ತಾ ಇತ್ತು. ರಾಮ ತನ್ನ ಗೆಳೆಯ ರಾಜೀವನಿಗೆ ಹೇಳ್ದಾ "ನೋಡೋ ನಮ್ ಶಾಲೆಗೆ ರಜೆ ಅಂತ ಗೊತ್ತಾಗಿ ಇವತ್ತೂ ಬಂದಿದಾನೆ ಐಸ್ ಕ್ಯಾಂಡಿ ಅವ್ನು", ಪ್ರತ್ಯುತ್ತರವಾಗಿ ರಾಜೀವ್ "ಯಾಕೋ ಗಂಟೆ ಶಬ್ದ ಬೇರೆ ಥರಾ ಇದ್ಯಲ್ಲಾ?!". ಅಷ್ಟರಲ್ಲಿ ರಾಜೀವನ ತಾಯಿ, "ಕಾಲು ಮುರಿತೀನಿ ಹೊರಗೆ ಕಾಲಿಟ್ರೆ, ನಾಳೆ ತಿನ್ನುವಂತ್ರಿ" ಅಂದವ್ಳೆ, ಸರಸರನೆ ಹೋಗಿ ಬಾಗಿಲು ದಡಾರನೆ ಹಾಕಿ, ಭದ್ರವಾಗಿ ಚಿಲಕಾನೂ ಹಾಕಿದ್ಲು. ಆಕಡೆ ರಾಮ - ರಾಜೀವ ತಮ್ಮ ರೈಲುಬಂಡಿ ಆಟ ಮತ್ತೆ ಸ್ಟಾರ್ಟ್ ಮಾಡಿದ್ರು.
                       ಈ ಕಡೆ ಸೋಮನ ಹೆಂಡತಿ ರಂಗಿ ಅವಸರವಸರವಾಗಿ ಹೋಗಿ ಮುಂದಿನ ಬಾಗಿಲು ಹಾಕಿ, ಬಚ್ಚಲುಮನೆ ಬಾಗಿಲು ತೆಗ್ದು, ಅಡಿಗೆ ಮನೆ ಬಾಗಿಲು ಹಾಕಿ ಒಳಗೆ ಕೂತ್ಲು. ಇದ್ನೆಲ್ಲಾ ನೋಡ್ತಾ ಇದ್ದ ಗುಂಡನಿಗೆ ಮಾತ್ರ ಏನು ಅರ್ಥ ಆಗ್ತಾ ಇರ್ಲಿಲ್ಲ, ಗಂಟೆ ಶಬ್ದ ಆಗ್ತಾನೆ ಇತ್ತು. ಕಿಟಕಿ ತೆಗಿಯಕೆ ಹೋದ, ಕೈಮಣಿಗೆ ಸರೀಗೆ ಕೊಟ್ಲು ರಂಗಿ ಅಳ್ತಾ ಗುಂಡ ಅಟ್ಟ ಹತ್ತಿದ. ಮೇಲಿನ ಕಿಟಕಿಯಿಂದ ನೋಡಿದ್ರೆ ಊರೆಲ್ಲಾ ಸ್ತಬ್ಧ, ಎಲ್ಲಾ ಮನೆ ಬಾಗಿಲು ಕಿಟಕಿ ಬಂದ್, ಗುಂಡ ಹುಚ್ಚನಂತಾದ. ಅಷ್ಟರಲ್ಲಿ ತಲೆಯೇ ಇಲ್ಲದ ಒಬ್ಬ ಮಡಕೆಯನ್ನೇ ತಲೆ ಮಾಡ್ಕೊಂಡು ಮೂಗು ಬಾಯಿ ಇಲ್ದೇ ಬರೀ ಕಣ್ಣು ಮಾತ್ರ ಇಟ್ಕೊಂಡು ಬರ್ತಾ ಇದ್ದ. ಗುಂಡನಿಗೆ ಅಚ್ಚರಿಯೋ ಅಚ್ಚರಿ, ನೋಡ್ತಾ  ನೋಡ್ತಾ ಅವ್ನು ಮಾಡಿಯಿಂದ ತನ್ನ ಬಚ್ಚಲು ಮನೆ ಕಡೆಗೆ ಹೊರಟಿದ್ದನ್ನ ನೋಡ್ದ, ರಂಗಿಗೆ ಹೇಳುದ್ರೆ ಮತ್ತೆ ಹೊಡಿತಾಳೆ ಅಂತ ತೆಪ್ಪಗಾದ. ಸ್ವಲ್ಪ ಹೊತ್ತಾದ ಮೇಲೆ ಮತ್ತೆ ಅದೇ ತಲೆ ಇಲ್ಲದ ಮಡಕೆ ಮೂತಿಯವ ಗಂಟೆ ಬಾರಿಸ್ತಾ ಬಂದ ದಾರಿ ಹಿಡ್ಕೊಂಡು ಹೋದ. ತನ್ನ ಬರುವಿಕೆಗೂ ತಿರುಗಿ ಮರೆಯಾಗೋದಕ್ಕೂ ಅರ್ಥವೇ ಇಲ್ಲ ಅನ್ನೋ ರೀತಿಯಲ್ಲಿ ಅವನ ಗಂಟೆ ಶಬ್ದ ಸತ್ತೋಯ್ತು.
                       ಆಮೇಲೆ ಊರೋರ್ಗೆ ಏನಾಯ್ತೋ ಗೊತ್ತಿಲ್ಲ ಯುಗಾದಿ ಹಬ್ಬಕ್ಕೂ ಆ ಥರ ಬೀದಿ ಕ್ಲೀನ್ ಮಾಡಿರ್ಲಿಲ್ಲ ಆ ಥರ ತಿಕ್ಕಿದ್ದು - ತೊಳ್ದಿದ್ದು. ಊರವ್ರೆಲ್ಲಾ ಬೀದಿ ತೊಳಿತಿದ್ರೆ ರಂಗಿ ಮನೆನೇ ತೊಳಿತಿದ್ಲು. ಗುಂಡ ಅವ್ಳ್ನ ನೋಡಿ ನಮ್ಮವ್ವಂಗೆ ಏನೋ ತಿಕ್ಲು ಅಂತ ಮನ್ಸಲ್ಲೇ ಅನ್ಕೊಂಡು ಬಯಲಿಗೆ ಅಂತ ಚೊಂಬು ಕೇಳುದ್ರೆ ರಂಗಿ, ಮನೆ ಹಿಂದೆ ಹೋಗು ಅಂದ್ಲು. ಇವ್ನು ಮೂಗು ಮುಚ್ಕಂಡು ಹಿಂದಕ್ಕೆ ಹೋದ್ರೆ ಅಲ್ಲಿ ಬೆಳಿಗ್ಗೆಯಿಂದ ಇದ್ದ ಅಸಹ್ಯ ಎಲ್ಲಾ ಹೋಗಿ ಮತ್ತೆ ನಾರ್ಮಲ್ ಆಗೋಗಿದೆ. ಏನೋ ಮಡಕೆ ತಲೆ ಅವ್ನು ಚಮತ್ಕಾರ ಮಾಡಿ ಹೋಗಿದಾನೆ ಅಂತ ತನ್ನ ಕೆಲ್ಸ ಮುಗುಸ್ಕೊಂಡು, ರಾಮ-ರಾಜೀವನ ರೈಲಿಗೆ ತನ್ನ ಬಂಡೀನೂ ಸೇರುಸ್ದಾ.

ಮುಂದುವರೆಯುವುದು.....

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಒಂದು ಅಲಾರಾಂನ ಕಥೆ

ನನಗಾಗಿ