ಪರೀಕ್ಷೆ
ಮೊನ್ನೆ ಪರೀಕ್ಷೆಯೊಂದರ ಇನ್ವಿಜಿಲೇಷನ್ ಗಾಗಿ ಕಾಲೇಜೊಂದಕ್ಕೆ ಹೋಗಬೇಕಾಯಿತು, ಸ್ವಲ್ಪ ತಡವಾಗಿ ಕೇಂದ್ರ ತಲುಪಿದ ನನಗೆ... ನಾನು ಹೋಗಬೇಕಾದ ಕೊಠಡಿ ಹಾಗೂ ಪತ್ರಿಕೆಗಳ ಕವರ್ ನೀಡಿ ಸಂಯೋಜಕರು ಹಾದಿ ತೋರಿದರು. ಹೋದವನೇ ಉತ್ತರ ಪತ್ರಿಕೆಗಳ ಬಂಡಲ್ ತೆಗೆದು, ಮೊದಲನೇ ಬೆಂಚಿನಲ್ಲಿ ಕೂತಿದ್ದ ಹುಡುಗಿಗೆ ಒಂದು ಶೀಟ್ ತೆಗೆದುಕೊಂಡು ಉಳಿದವನ್ನು ಹಿಂದಕ್ಕೆ ಪಾಸ್ ಮಾಡುವಂತೆ ಹೇಳಿದೆ, ಆ ಹುಡುಗಿ ನನ್ನ ಮುಖವನ್ನೇ ನೋಡುತ್ತಿತ್ತು... ಆಗ ನಾನು ಕನ್ನಡ ಗೊತ್ತಿಲ್ಲವೇನೋ ಎಂದುಕೊಂಡು ಇಂಗ್ಲೀಷಿನಲ್ಲಿ ಒಮ್ಮೆ ಹೇಳಿದೆ, ಆಗಲೂ ಆ ಹುಡುಗಿ ಹಿಂದೆ ತಿರುಗಿ ಸಹಪಾಠಿಯನ್ನು ನೋಡಿ ನಕ್ಕು ಮತ್ತೆ ನನ್ನ ಕಣ್ಣು ಬಾಯಿಯನ್ನೇ ನೋಡಿತು... ಏನಾಗುತ್ತಿದೆ ಎನ್ನುವಷ್ಟರಲ್ಲಿ ನಾನು ಸ್ವಲ್ಪ ಏರು ಧ್ವನಿಯಲ್ಲಿ ಮತ್ತೊಮ್ಮೆ ಹೇಳಿದೆ. ಆಗ ಆ ಮಗು ತನ್ನ ಕಿವಿ - ಬಾಯಿಯನ್ನು ತೋರಿಸುತ್ತಾ ತನಗೆ ಶ್ರವಣ - ಮಾತು ಬರುವುದಿಲ್ಲ ಎಂದು ಸನ್ನೆಯಲ್ಲಿ ತೋರಿಸಿತು... ಅಲ್ಲಿಂದ ಮುಂದೆ ಹತ್ತು-ಹದಿನೈದು ನಿಮಿಷ ನನ್ನ ದೇಹ ಯಾಂತ್ರಿಕವಾಗಿ, ಕೆಲಸ ಮಾಡಿತೇ ವಿನಃ ಮೆದುಳು ಮಾತ್ರ ಮಂಕು ಬಡಿದಂತೆಯೇ ಆಗಿಬಿಟ್ಟಿತು.