ಒಂದು ಅಲಾರಾಂನ ಕಥೆ

ಪಿಯು ಓದುವ ಸೆಪ್ಟೆಂಬರ್ ತಿಂಗಳ ಒಂದು ದಿನ (ದಿನ‌ ಖಂಡಿತಾ ನೆನಪಿಲ್ಲ), ನಾನು ದ್ವಿತೀಯ ಪಿಯು ಆಳ್ವಾಸ್ ಕಾಲೇಜಿನಲ್ಲಿ ಓದುತ್ತಿದ್ದ ಸಮಯ. ಅಂದು ಸುಮಾರು ೧೨ ಗಂಟೆ ಮಧ್ಯಾಹ್ನ ಫಿಸಿಕ್ಸ್ ತರಗತಿ ನಡೆಯುತ್ತಿತ್ತು. ಕವಿತಾ ಮೇಡಮ್ ನಮ್ಮ ಟೀಚರ್, ಚೆನ್ನಾಗಿಯೇ ಪಾಠ‌ ಮಾಡುತ್ತಿದ್ದರು ಅಂತಿಟ್ಟುಕೊಳ್ಳಿ. ಅವರು ಪಾಠ ಮಾಡಿದ್ದು ಹಾಗೆಯೇ ಪ್ರಥಮ ಮತ್ತು ದ್ವಿತೀಯ ವರ್ಷದ ನಡುವಿನಲ್ಲಿ ನಡೆದ ಕ್ರಾಶ್ ಕೋರ್ಸ್ ಸಮಯದಲ್ಲಿ ತಿಳಿದ ಫಿಸಿಕ್ಸ್ ಬಗೆಗಿನ ಹಲವು ವಿಚಾರಗಳು ನನಗೆ ಫಿಸಿಕ್ಸ್ ನಲ್ಲಿ ಅತಿಯಾಗಿ ಆಸಕ್ತಿಯನ್ನು ಹೆಚ್ಚಿಸಿದ್ದವು‌‌. ಅದರಲ್ಲೂ ಪ್ರಮುಖವಾದವು ನ್ಯೂಕ್ಲಿಯರ್ ಫಿಸಿಕ್ಸ್, ಆಸ್ಟ್ರೋ ಫಿಸಿಕ್ಸ್ ಮತ್ತು ಇಲೆಕ್ಟ್ರೋಮ್ಯಾಗ್ನೆಟಿಸಂ.

    ನಮ್ಮ‌ ಪಠ್ಯದ ಹೊರತಾಗಿಯೂ ಫಿಸಿಕ್ಸ್ ನ ಹಲವು ವಿಚಾರಗಳನ್ನು ತಿಳಿಯಲು ಮನಸ್ಸು ಹಾತೊರೆಯುತ್ತಿತ್ತು. ಇಂದಿಗೂ ನಾನು ಉತ್ಸಾಹದಿಂದ ಈ ವಿಷಯಗಳನ್ನು ಗಮನಿಸುತ್ತೇನೆ. ಇದೇ ಆಸಕ್ತಿ ದ್ವಿತೀಯ ಪಿಯು ಫಿಸಿಕ್ಸ್ ಪರೀಕ್ಷೆಯಲ್ಲಿ ನೂರಕ್ಕೆ ನೂರು ಅಂಕ ತೆಗೆಯಲು ಸಾಧ್ಯವಾಯಿತು. ಅಂತೆಯೇ ಎಂಜಿನಿಯರಿಂಗ್ ನಲ್ಲಿ ಇಲೆಕ್ಟ್ರಿಕಲ್ ಆಯ್ಕೆ ಮಾಡಲೂ ಒಂದೆಡೆಯಿಂದ ಸ್ಪೂರ್ತಿಯಾಯಿತೆಂದರೆ ತಪ್ಪಲ್ಲ. ಆದರೆ ವಿದ್ಯಾರ್ಥಿಗಳೆಂದ ಮೇಲೆ ಬಹುತೇಕ ಎಲ್ಲರ ಮನೋಭಾವ ಒಂದೇ ಭಾವಿಸುತ್ತೇನೆ. ನಾವೆಲ್ಲಾ ಟೀಚರ್ಸ್ ನ ನೋಡೋದೇ ನಮ್ಮ ವಿರೋಧಿಗಳ ಹಾಗೆ, ಅವರು ನೋಟ್ಸ್ ಬರೀರಿ ಅಂದ್ರೂ ಕಷ್ಟ, ಆನ್ಸರ್ ಮಾಡು ಅಂದ್ರೂ ಕಷ್ಟ, ಇತ್ಯಾದಿ.

ಆಳ್ವಾಸ್ ಪಿಯು ಕಾಲೇಜು, ಮೂಡುಬಿದಿರೆ.

    ಅವತ್ತಿನ‌ ದಿನ, ತರಗತಿ ನಡೆಯುವ ಸಮಯದಲ್ಲಿ ಒಂದು ಅಲಾರಾಮಿನ ಶಬ್ದ ಒಂದೇ ಸಮನೆ‌ ಬಡಿದುಕೊಳ್ಳಲಾರಂಭಿಸಿತು. ಕ್ಲಾಸಿನಲ್ಲಿ ನಮಗೆ ಬರೆಯಲು ಒಂದು ಮತ್ತೆ ಕೂರಲು‌ ಒಂದು ಟೇಬರ್ ಗಳು ಇದ್ದವು. ಬ್ಯಾಗ್ ಇಡಲು ಜಾಗವಿರದ ಕಾರಣ ಎಲ್ಲರೂ ಗೋಡೇ ಪಕ್ಕದಲ್ಲಿ ಬ್ಯಾಗ್ ಗಳನ್ನು ಇಟ್ಟಿರುತ್ತಿದ್ದೆವು. ಹಾಗಾಗಿ ಶಬ್ದ ಎಲ್ಲಿಂದ ಬರುತ್ತಿದೆ ಎಂದು ಹುಡುಕುವಷ್ಟರಲ್ಲಿ ಅದು ನಿಂತು, ತರಗತಿ ಮತ್ತೆ ಆರಂಭವಾಯಿತು. ನಮ್ಮ ಮೇಡಮ್ ಮುಖದಲ್ಲಿ ಆಗಲೇ ಸಿಟ್ಟಿನ ಸುಳಿವು ಗೋಚರವಾಗುತ್ತಿತ್ತು.


    ಅಲಾರಾಂ ಗಡಿಯಾರ ಅಂದ ಮೇಲೆ ಕೇಳ್ಬೇಕಾ, ಅದು ಒಂದೇ ಬಾರಿಗೆ ನಿಲ್ಲುವಂತದ್ದಲ್ಲ. ಇಲ್ಲಿಯೂ ಐದು ನಿಮಿಷಗಳ ನಂತರ ಅದೇ ಆಯ್ತು. ಕವಿತಾ ಮೇಡಮ್ ಕೆಂಡಾಮಂಡಲರಾದ್ರು, ಹಾಗೂ ಇದನ್ನು ಸ್ಟೂಡೆಂಟ್ಸ್ ಎಲ್ಲಾ‌ ಸೇರಿ ಬೇಕಂತಲೇ ಮಾಡಿದ್ದಾರೆಂದು ಭಾವಿಸಿಬಿಟ್ಟರು. ಇಡೀ ತರಗತಿಯೇ ಸೇರಿ ಹುಡುಕಿದ್ದಾ

ಯ್ತು, ಇಲ್ಲಿ ಇನ್ನೊಂದು ವಿಚಾರ ಆಗಿನ‌ ಕಾಲಕ್ಕೆ ಆಳ್ವಾಸ್ ಎಲ್ಲಾ ಪಿಯು ಸ್ಟೂಡೆಂಟ್ಸ್ ಗಳ ಪೋಷಕರ ಅಚ್ಚುಮೆಚ್ಚಿನ ಆಯ್ಕೆಯ ಜಾಗ. ತರಗತಿಯೊಂದರಲ್ಲಿ ಸುಮಾರು ೮೫ ಜನರಿರುತ್ತಿದ್ದರು. ಕೇವಲ ಬಯಾಲಜಿ (ಪಿಸಿಎಂಬಿ) ಯಲ್ಲೇ ಅಂತಹ ೨೪ ಬ್ಯಾಚ್ ಗಳು ನಮ್ಮ ವರ್ಷದಲ್ಲಿದ್ದವು.

    ಬ್ಯಾಗ್ ಗಳ ಗುಂಪಿನಿಂದ ಒಂದೊಂದೇ ನೋಡುತ್ತಾ ಹೋದಂತೆ ಶಬ್ದಬರುವ ಬ್ಯಾಗ್ ಸಿಕ್ತು. ಬ್ಯಾಗ್ ಓಪನ್ ಮಾಡಿ ನೋಡಿದರೆ ಅಲಾರಾಂ ಗಡಿಯಾರ. ಆ ಬ್ಯಾಗ್ ನಮ್ಮ ಶಾಂತಕುಮಾರನದ್ದು, ತನ್ನ ಬ್ಯಾಗಿನಿಂದ ಅಲಾರಾಂ ಗಡಿಯಾರ ಹೊರಬರುತ್ತಿದ್ದಂತೆ ಶಾಂತಕುಮಾರ ಪೆಚ್ಚು ಬಿದ್ದ. ಎಲ್ಲಾ ರೀತಿಯ ವಿಚಾರಣೆ ನಡೆಯಿತು. ಬೆಳಗ್ಗೆ ಹಾಸ್ಟೆಲಿನಿಂದ ಹೊರಡುವಾಗ ಆಕಸ್ಮಿಕವಾಗಿ ಬ್ಯಾಗಿನಲ್ಲಿ ಸೇರಿದೆಯೆಂಬ ಮಾತು ಖಾತರಿಯಾಗಿ, ಮೇಡಂ ನಂಬಿದ ನಂತರ ಅಂದಿನ ವಿಷಯ ಅಲ್ಲಿಗೆ ಮುಗಿಯಿತು.

    ನಾನು ದ್ವಿತೀಯ ಪಿಯುಸಿ ಓದುವಾಗ ಮೂಡುಬಿದ್ರೆ ನಗರದಲ್ಲೇ ಇರುವ ಜ್ಯೋತಿನಗರ ಹಾಸ್ಟೆಲಿನಲ್ಲಿದ್ದದ್ದು. ಅದು ಒಂದು ಕಾಂಪೌಂಡಿನೊಳಗೆ ಅನೇಕ ಮನೆಗಳಿರುವ ಒಂದು ವಠಾರದ ರೀತಿಯದ್ದು, ಅಲ್ಲಿ ನೂರಕ್ಕೂ ಹೆಚ್ಚು ಮನೆಗಳಿದ್ದು ಪ್ರತಿ ಮನೆಯಲ್ಲೂ ಒಂಬತ್ತು ಜನಕ್ಕೆ ವಸತಿ ವ್ಯವಸ್ಥೆ ಇತ್ತು. ಎಂಟ್ರೆನ್ಸ್ ರೂಮಿನಲ್ಲಿ ಒಬ್ಬ,  ಎರಡು ರೂಮುಗಳು ಒಂದರಲ್ಲಿ ಇಬ್ಬರು ಮತ್ತೊಂದರಲ್ಲಿ ಮೂವರು ಇದರಲ್ಲೇ ನಾನಿದ್ದದ್ದು. (ಭರತ್, ನಾನು ಮತ್ತು ಪ್ರಜ್ವಲ್) ಹಾಗೆಯೇ ಹಾಲ್ ನಲ್ಲಿ ಇಬ್ಬರು, ಕಿಚನ್ ನಲ್ಲಿ ಒಬ್ಬರು ಇರುವಂತೆ ವ್ಯವಸ್ಥೆ ಮಾಡಿದ್ದರು ಅಂದಹಾಗೆ ಮೊದಲ ವರ್ಷ ಪುತ್ತಿಗೆಯ  ಗಂಗೋತ್ರಿ ಹಾಸ್ಟೆಲ್ ನಲ್ಲಿದ್ದೆ.

ನಮ್ಮ ಹಾಸ್ಟೆಲ್ ನ ಒಂದು ನೋಟ
(ಬಹುಶಃ ಈಗ ಅಲ್ಲಿ ಆಳ್ವಾಸ್ ಹಾಸ್ಟೆಲ್ ಇಲ್ಲ)

    ಇಂದಿಗೆ ಆ ಮನೆಯ ಎಂಟ್ರೆನ್ಸ್ ನಲ್ಲಿದ್ದ ಪವನ್ ಸಂಪರ್ಕದಲ್ಲಿದ್ದು ಆಗಾಗ ನಮ್ಮ ಭೇಟಿಯಾಗುತ್ತಿರುತ್ತದೆ. ಇನ್ನೊಂದು ರೂಮಿನ ವಿಶ್ವಾಸ್, ರಾಘವೇಂದ್ರ ಹಾಗೂ ನಮ್ಮ ರೂಮಿನ ಭರತ್ ಗಾಯಕವಾಡ್ ಇನ್ಸ್ಟಾಗ್ರಾಮ್ ನಲ್ಲಿ ಹೊರತುಪಡಿಸಿ ಇನ್ಯಾರ ಪತ್ತೆಯೂ ಇಲ್ಲ. ಹಾ ಹಾಗೆ ಇವರೆಲ್ಲ ನನ್ನ ತರಗತಿಯವರಲ್ಲ ಹಿಂದೆ ಹೇಳಿದೆನಲ್ಲಾ ಬಯಾಲಜಿಯ ೨೪ ಬ್ಯಾಚುಗಳು, ಅವುಗಳಲ್ಲಿ ಬೇರೆ ಬೇರೆ ತರಗತಿಗೆ ಸೇರಿದವರು.

    ಹಾಸ್ಟೆಲ್ ಎಂದರೆ ಬೆಳಗ್ಗೆ ೪:೪೫ಕ್ಕೆ ಎದ್ದೇಳು, ೫:೧೫ಕ್ಕೆ ಓದಲು ಕೂರು, ೭:೩೦ ರಿಂದ ತಯಾರಾಗಿ ಶಾಲೆಗೆ ಹೋಗು, ಮಧ್ಯಾಹ್ನ ಹಾಸ್ಟೆಲ್ ಬಾ, ಓದಲು ಕೂರು, ಸಂಜೆ ಅರ್ಧ ಗಂಟೆ ವಿರಾಮ, ಮತ್ತೆ ಓದು, ರಾತ್ರಿ ಊಟದ ಬ್ರೇಕ್, ಮತ್ತೆ ಓದು... ಕೊನೆಗೆ ನಿದ್ದೆ.  ಇದಿಷ್ಟೇ ಅಲ್ಲಿನ ದಿನಚರಿ, ವಿರಾಮದಲ್ಲಿ ಅದೇ ಹಾಸ್ಟೆಲಿನ ಬೇರೆ ಮನೆಗಳಲ್ಲಿ ಇದ್ದ ನನ್ನ ತರಗತಿಯವರೊಂದಿಗೆ ಒಡನಾಟ ಹೆಚ್ಚು. ಓದಿನ ಸಮಯದಲ್ಲಿ ರೂಮಿನವರೊಡನೆಯೂ ಮಾತನಾಡುವಂತಿರಲಿಲ್ಲ. ನಮ್ಮನ್ನು ಕಾಯಲು ಇದ್ದ ೮-೧೦ ವಾರ್ಡನ್ ಗಳೇ, ಇದಕ್ಕೆ ಕಾರಣ.

ನಮ್ಮ ಹಾಸ್ಟೆಲ್ ನ ಮತ್ತೊಂದು ನೋಟ

    ಅಲ್ಲಿ ಓದುವುದನ್ನು ಬಿಟ್ಟು ಬೇರೆನಕ್ಕೂ ಅವಕಾಶ ಇಲ್ಲ. ಈಗ ಅನಿಸುತ್ತೆ ಇದೇ ಕಾರಣಕ್ಕೆ ನಾವು ಅನ್ಯ ವಿಧಿ ಇಲ್ಲದೆ ಓದುತ್ತಿರುವಾಗ ನಮಗೆ ಪುಸ್ತಕಗಳೇ ಮನರಂಜನೆಯ ಭಾಗವಾದವು (ಅದರಲ್ಲೂ ಪಠ್ಯಕ್ಕೆ ಸಂಬಂಧಿಸಿದ್ದು ಬಿಟ್ಟು ಬೇರೇ ಪುಸ್ತಕ ಓದುವಂತಿರಲಿಲ್ಲ).  ಇಲ್ಲಿ ಫಿಸಿಕ್ಸ್ ನನ್ನ ಮನಸ್ಸಿಗೆ ಅತಿಯಾದ ಸನಿಹಕ್ಕೆ ಬಂದಿರಬಹುದು ಹಾಗಂತ ಬೇರೆ ವಿಷಯಗಳ ಬಗ್ಗೆ ತಿರಸ್ಕಾರ ಅಂತಿಲ್ಲ, ಕನ್ನಡ ಹಾಗೆಯೇ ಆರ್ಗ್ಯಾನಿಕ್ ಕೆಮಿಸ್ಟ್ರಿ ನನ್ನ ಅಚ್ಚುಮೆಚ್ಚಿನ ವಿಷಯಗಳಾಗಿದ್ದವು. ಈ ಹಾಸ್ಟೆಲ್ ನ ಕಾರಣಕ್ಕೇ ನಾನು ೯೩% ದೊಂದಿಗೆ ತೇರ್ಗಡೆಯಾದೆ ಎಂಬುದು ಸುಳ್ಳಲ್ಲ.

    ಹಿಂದೆ ಹೇಳಿದಂತೆ ನಮ್ಮ ಹಾಸ್ಟೆಲ್ ಇದ್ದದ್ದು ಜ್ಯೋತಿನಗರದಲ್ಲಿ. ಆ ಹಾಸ್ಟೆಲು ಸುಮಾರು ಒಂದೂವರೆ ಎರಡು ಎಕರೆಯಲ್ಲಿದ್ದಿರಬಹುದು. ನಾನಿದ್ದ ಮನೆ ಗೇಟಿನ ಬಳಿಯೇ ಇದ್ದಿತು, ಅಲ್ಲಿಂದ ಹಿಂದೆ ೧೫೦-೨೦೦ ಮೀಟರಿನಲ್ಲಿ ಊಟದ ಮೆಸ್ ಇದ್ದದ್ದು, ಅಷ್ಟುದ್ದ‌ ಇತ್ತು ನಮ್ಮ ಹಾಸ್ಟೆಲ್ ಅದರ ಹಿಂದೆಯೂ ಒಂದಷ್ಟು ಹಾಸ್ಟೆಲ್ ಮನೆಗಳಿದ್ದವು. ಇನ್ನು ಊಟದ ವಿಷಯ, ದಕ್ಷಿಣಕನ್ನಡ (ಮಂಗಳೂರು) ಹಾಸ್ಟೆಲುಗಳಲ್ಲಿನ ಮೆಸ್ಸುಗಳ ಬಗ್ಗೆ ನಾನು ಮಾತನಾಡದಿರುವುದೇ ಒಳ್ಳೆಯದು. ಊಟದ ಕುರಿತು ಕಂಪ್ಲೇಂಟ್ ಅಲ್ಲ, ನಮಗಾರಿಗೂ ಆ ಊಟ ಒಗ್ಗುತ್ತಿರಲಿಲ್ಲ ಅಷ್ಟೇ.

ನಮ್ಮ ಹಾಸ್ಟೆಲ್ ಮುಂಬಾಗದಲ್ಲೇ‌ ಇದ್ದ ಒಂದು ಸುಂದರ ಶಾಲೆ
(ಬಾಬು ರಾಜೇಂದ್ರ ಪ್ರಸಾದ್ ಪ್ರೌಢಶಾಲೆ)

    ಅಂದಿನ‌ ದಿನ ತರಗತಿಗಳನ್ನು ಮುಗಿಸಿಕೊಂಡು ಹಾಸ್ಟೆಲಿಗೆ ಬಂದು ಎಂದಿನಂತೆ ಓದು... ಸಂಜೆಯ ಊಟದ ಸಮಯದಲ್ಲಿ ನಾನು ಮತ್ತೆ ರಾಘವೇಂದ್ರ ಈ ಅಲಾರಾಂ ಗಡಿಯಾರದ‌ ವಿಚಾರ ಮಾತನಾಡುತ್ತಾ, ಅವನಿಗೆ ತನ್ನ ಗಡಿಯಾರದ‌ ನೆನಪಾಯ್ತು. ಎಷ್ಟೋ ತಿಂಗಳಿಂದ ಶೆಲ್ ಇಲ್ಲದೇ ನಿಂತಿದ್ದ ಅದಕ್ಕೆ ಮರುಜೀವ ನೀಡುವ ಉಪಾಯ ಮಾಡಿದೆವು, ಆದರೆ ಅದರ ಅಂತಿಮ ಸ್ಥಳ ಹಾಸ್ಟೆಲ್ ಅಲ್ಲ ಬೇರೆಯೇ ಇತ್ತು.

    ಮಾರನೆಯ ದಿನ, ಮೊದಲನೇ ಬಸ್ಸಿಗೇ ಹೊರಟು ಕಾಲೇಜು ತಲುಪಿದೆವು. ಕಾಲೇಜು ಕಾಂಪೌಂಡಿನಿಂದ ಹೊರಗೆ ಸ್ವಲ್ಪ ದೂರದಲ್ಲಿನ‌ ಸ್ಟೇಷನರಿಯಿಂದ ಶೆಲ್ ಒಂದನ್ನು ಕೊಂಡು‌ ಗಡಿಯಾರಕ್ಕೆ ಹಾಕಿ, ಮೊದಲಿಗರಾಗಿ ತರಗತಿಗೆ ತೆರಳಿ, ಸ್ಟೇಜ್ ಮೇಲಿನ ಪೋಡಿಯಂನ ಕೆಳಭಾಗದಲ್ಲಿ ನಮ್ಮ ನೆಚ್ಚಿನ ಕವಿತಾ ಮೇಡಂ ಅವರ ತರಗತಿಯ ನಡುವಿಗ ಅಲಾರಂ ಸೆಟ್ ಮಾಡಿ, ಬುಕ್ ಗಳ ನಡುವೆ ಮುಚ್ಚಿಟ್ಟೆವು. ನಂತರ ಒಬ್ಬೊಬ್ಬರೇ ಬೇರೆ ಬೇರೆ   ಹಾಸ್ಟೆಲುಗಳಿಂದ ಬಂದು ತರಗತಿಗಳೂ ಆರಂಭವಾದವು.

    ಅಂದಿನ ಕಡೇಯ ಕ್ಲಾಸ್ ಆರಂಭವಾಯಿತು, ತರಗತಿಯ ನಡುವಿಗೆ ಸರಿಯಾಗಿ ಅಲಾರಾಂ ಬಡಿಯಲಾರಂಭಿಸಿತು. ಟೀಚರ್ ಬೆಂಕಿಯುಂಡೆಯಂತಾದರು, ಇಡೀ ತರಗತಿ ಗಲಿಬಿಲಿಗೊಳಗಾಯಿತು. ಬುಕ್‌ ಗಳಡಿಯಲ್ಲಿ ಮುಚ್ಚಿಟ್ಟದ್ದರಿಂದ ಶಬ್ದ ಎಲ್ಲಿಂದ ಬರುತ್ತಿದೆ ಎಂದು ಮೊದಮೊದಲಿಗೆ ತಿಳಿಯದೇ ಹುಡುಕಾಟ ಆರಂಭವಾಯಿತು, ಕೊನೆಗೆ ತರಗತಿಯ CR ಪೋಡಿಯಂನಿಂದ ಹಳದಿ ಹೊರಬಣ್ಣದ ಬಿಳಯ ಡಯಲ್ ಹೊಂದಿರುವ ಗಡಿಯಾರ ಹೊರತೆಗೆದಳು. ಇದು ಪಕ್ಕಾ ವಿದ್ಯಾರ್ಥಿಗಳ ಕುಚೋದ್ಯ ಎಂದು ಅರಿಯದಿರಲೂ ಬೇರೇನೂ ಕಾರಣವಿರಲಿಲ್ಲ, ಆದರೆ ಯಾರು ಮಾಡಿರಬಹುದು ನಮ್ಮವರೇ?  ಅಥವಾ ಬೇರೆ ಕ್ಲಾಸಿನವರೇ? ಎಂಬ ಗುಸುಗುಸು ನಮ್ಮ-ನಮ್ಮಲ್ಲೇ ಆರಂಭವಾಯ್ತು, ಹಲವರ ಕಣ್ಣು ನಮ್ಮ ತರಗತಿಯ ಹ್ಯಾಬಿಚುವಲ್ ಅಫೆಂಡರ್ಸ್ ಅಂತೀವಲ್ಲ ಅವರ ಮೇಲೆ‌ ಬಿತ್ತು. ತಕ್ಷಣಕ್ಕೇ ಮೇಡಮ್ ತರಗತಿಯಿಂದ ಮಾತನಾಡದೇ ಹೊರನಡೆದರು.

    ಸ್ವಲ್ಪ ಸಮಯದ ಬಳಿಕ, ಬಂದ ನಮ್ಮ ಕ್ಲಾಸ್ ಟೀಚರ್ ಸುರೇಖಾ ಮೇಡಂ, ಪ್ರತಿಯೊಬ್ಬರಿಗೂ ಸರಿಯಾಗಿ ಉಗಿದು ಇದನ್ನು ಮಾಡಿದ್ದಾರು ಎಂದು ಒಪ್ಪಿಕೊಳ್ಳದಿದ್ದರೆ ಅಥವಾ ಇತರರೂ ಗುರುತಿಸಿ ಹೇಳದಿದ್ದರೆ ತರಗತಿಗಳು ಇನ್ನು ನಡೆಯುವುದಿಲ್ಲವೆಂದು ಹೇಳಿಬಿಟ್ಟರು. ಅಂದಿನಿಂದ ಎರಡ್ಮೂರು ದಿನ, ಉಳಿದ ತರಗತಿಗಳ ವಿದ್ಯಾರ್ಥಿಗಳು, ಶಿಕ್ಷಕರ ಬಾಯಲ್ಲೂ ಅದೇ ಮಾತು.

    ಸ್ಟಡಿ‌ ಅವರ್ ನಲ್ಲಿ ಓದದಿದ್ದರೆ, ಶಿಸ್ತು ಕಾಪಾಡದಿದ್ದರೆ, ತರಗತಿಯ ಹುಡುಗಿಯರೊಂದಿಗೆ ಮಾತನಾಡಿದರೂ ನೇರವಾಗಿ ಪೋಷಕರಿಗೆ ಕರೆಮಾಡಿ ಕರೆಸುತ್ತಿದ್ದರು, ತಪ್ಪು ತುಸು ಹೆಚ್ಚೆನಿಸಿದರೆ ಹಾಗೆಯೇ ಟಿ.ಸಿ. ಕೊಟ್ಟು ಮನೆಗೆ ಕಳುಹಿಸುವುದಂತೂ ಆಡಳಿತವರ್ಗಕ್ಕೆ ಅತಿ ಸಲೀಸಿನ ವಿಷಯ. ಬರೀ ಪಿಯುಸಿಯಲ್ಲೇ ಏಳೆಂಟು ಸಾವಿರ ಜನರಿರುವಾಗ ಇಂತಹ ಕ್ರಮಗಳು ಅವಶ್ಯಕವೇ ಸರಿಬಿಡಿ. ಇನ್ನು ಗಡಿಯಾರ ಇಟ್ಟದ್ದು ನಾವೇ ಎಂದು ಗೊತ್ತಾಗಿಬಿಟ್ಟಿದ್ದರೆ, ನಮ್ಮ ಕಥೆ ಅಷ್ಟೇ, ಏನಾಗುತ್ತಿತ್ತೋ ಕಾಣೆ. ದೇವರದಯೆಯಿಂದ ನಾನು ಮತ್ತು ರಾಘವೇಂದ್ರನಿಗೆ ಮಾತ್ರವೇ ಈ ವಿಷಯ ತಿಳಿದಿತ್ತು, ಬಹುಶಃ ಈಗಲೂ ಹಲವರಿಗೆ ಗೊತ್ತಿಲ್ಲ. ಸಂಪರ್ಕದಲ್ಲಿರುವ ಕೆಲವರಿಗೆ ಹೇಳಿದರೂ ಅದನ್ನು ನೀವು ಮಾಡಿರಲು ಸಾಧ್ಯವಿಲ್ಲ ಎಂಬ ಉತ್ತರವೇ ಈಗಲೂ ಬರುತ್ತದೆ. ಅಂತೂ-ಇಂತೂ ಕಾಲೇಜು ಮುಗಿದರೂ ಎಲ್ಲರಿಗೂ ಇದೊಂದು ರೀತಿಯ ಚಿದಂಬರ ರಹಸ್ಯವಾಗಿಯೇ ಉಳಿಯಿತು.

ಈ ಲೇಖನದಲ್ಲಿ ಹೊಸ ರೀತಿಯ ಪ್ರಯತ್ನ ಮಾಡಿದ್ದೇನೆ, ಕೇವಲ ಒಂದೇ ವಿಷಯಕ್ಕೆ ಸೀಮಿತಗೊಳಿಸದೇ ಆಗಾಗ ಆ ವಿಚಾರದ ಹೊರ-ಒಳಗೂ ಹೋಗಿ ಬಂದಿರುವುದನ್ನು ನೀವು ಗಮನಿಸಬಹುದು. ಹಾಗಾಗಿ ಇದು ಇಲ್ಲಿಯವರೆಗೆ ನಾನು ಸಾಹಿತ್ಯದ ಹೊರತಾಗಿ ಬರೆದಿರುವ ಲೇಖನಗಳಲ್ಲಿ ಅತ್ಯಂತ ವಿಸ್ತೃತವಾಗಿದೆ.



All pic credits: Google

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ