ಎಂ.ಎ ಕನ್ನಡ
೨೦೨೦ ರ ಫೆಬ್ರವರಿಯಲ್ಲಿ ಯುಪಿಎಸ್ಸಿ ಐಚ್ಚಿಕ ವಿಷಯವಾಗಿದ್ದ ಕನ್ನಡ ಸಾಹಿತ್ಯದ ಪಠ್ಯವೇ ಬಹುವಾಗಿದ್ದು ನನ್ನ ಓದಿನೊಂದಿಗೆ ಪೂರಕವಾಗಿರುತ್ತದೆಂದು ಭಾವಿಸಿ ತಮ್ಮನಿಂದ ಹಣ ಪಡೆದು ಕರ್ನಾಟಕ ರಾಜ್ಯ ಮುಕ್ತ ವಿವಿಯಲ್ಲಿ ಎಂ.ಎ. ಕನ್ನಡ ಪದವಿ ಸೇರಿಕೊಂಡೆ.
ಮುಂದೆ ಎಲ್ಲರೂ ತೊಡಗುವಂತೆ ಬಂದ ಮಹಾಮಾರಿಯ ಕೃಪಾಕಟಾಕ್ಷದಿಂದ ಪ್ರಥಮ ವರ್ಷದ ಪರೀಕ್ಷೆಗಳು ಸರ್ಕಾರದಿಂದ ರದ್ದುಗೊಂಡರೂ ವಿವಿಯು ತೆರೆದ ಪುಸ್ತಕ ಪರೀಕ್ಷೆ ನಡೆಸಿ ಫಲಿತಾಂಶ ನೀಡಿತು. ದ್ವಿತೀಯ ವರ್ಷದ ಪರೀಕ್ಷೆಗಳು ೨೦೨೨ರ ಎಪ್ರಿಲ್‌ನಲ್ಲಿ ನಡೆದವು, ಮಲ್ಲೇಶ್ವರಂನ ಕಾಲೇಜೊಂದರಲ್ಲಿ ಪರೀಕ್ಷೆ ಬರೆದದ್ದು, ೨೦೨೨ರ ಜುಲೈ ೨೨ರಂದು ಫಲಿತಾಂಶ ಪ್ರಕಟಗೊಂಡಿತು. ೭೨.೭% ಜೊತೆಗೆ ಪ್ರಥಮ ದರ್ಜೆಯಲ್ಲಿ ತೇರ್ಗಡೆಗೊಂಡಿದ್ದೆನು.
ಇದಾಗಿ ಕೆಲವೇ ದಿನಗಳಲ್ಲಿ ನಮ್ಮ ಗುಂಪಿನ ಹಿರಿಯರೊಬ್ಬರು ಕರೆಮಾಡಿ, ಕಾಲೇಜೊಂದರಲ್ಲಿ ಅಧ್ಯಾಪಕರ ಅಗತ್ಯವಿದ್ದು ಅರ್ಜಿ ಹಾಕುವಂತೆ ತಿಳಿಸಿದರು. ಅದು ವಾರಕ್ಕೆ ಎಂಟು ಗಂಟೆಯ ತರಗತಿಗಳು, ವಾರಕ್ಕೆ ಮೂರು ದಿನ ಹೋಗಿ ಬರಬೇಕಿತ್ತು. ನನಗೆ ಓದಲು ಸಮಯ ಉಳಿಯುವುದೆಂದು ನಾನು ಅರ್ಜಿ ಹಾಕಿದೆ. ಮುಂದೆ ಸೇರ್ಪಡೆಯಾಗಿ ಆಗಸ್ಟ್ ಕೊನೆಯ ವಾರದಿಂದ ತರಗತಿಗಳು ಆರಂಭವಾದವು. ತರಗತಿ-ಪರೀಕ್ಷೆ-ವೈವಾ ಹೀಗೆ ತರಗತಿಗಳು ಮುಗಿದದ್ದೇ ತಿಳಿಯಲಿಲ್ಲ.
ಡಿಸೆಂಬರ್ ಮೊದಲ ವಾರ ವಿದ್ಯಾರ್ಥಿಗಳಿಗೆ ಪಾಠದ ಕೊನೆಯ ವಾರ, ಮುಂದಿನ ವಾರದಿಂದ ಆ ಸೆಮಿಸ್ಟರ್ ನ ಪರೀಕ್ಷೆಗಳು ಆರಂಭ. ಹೀಗೆ ನನ್ನ ಪಯಣ ಶಿಕ್ಷಕನಾಗಿಯೂ ನಡೆದದ್ದು ಸೋಜಿಗ. ಒಂದು ಹೊಸ ಅನುಭವ, ಬಹುಜನರಿದ್ದಾಗ ಮಾತನಾಡಲು ಹೆದರುತ್ತಿದ್ದ ನಾನು, ಎಂಬತ್ತು ವಿದ್ಯಾರ್ಥಿಗಳಿರುವ ತರಗತಿಗಳನ್ನು ಸಂಭಾಳಿಸಿದ್ದು ಅಚ್ಚರಿಯಂತೆ ತೋರುತ್ತದೆ. ವಿದ್ಯಾರ್ಥಿಗಳೊಂದಿಗೆ ಬೆರೆತು ಅವರೊಳಗೊಬ್ಬನಾಗಿ ಹೊರಬಂದಿದ್ದು ಸಂತಸ ತಂದಿದೆ.
ಎಂ.ಎ ಕನ್ನಡ ಮಾಡಿದಾದ ಮೇಲೆ ಹಲವಾರು ತರಗತಿಗಳನ್ನು ಕೆಎಸ್ಒಯು ಎಮ್.ಎ ವಿದ್ಯಾರ್ಥಿಗಳಿಗೆ, ಕನ್ನಡ ಹಾಗೂ ಕೆ.ಸೆಟ್ ವಿಚಾರವಾಗಿ ತೆಗೆದುಕೊಂಡಿದ್ದೇನೆ. ಆದರೆ ಅದು ಗೂಗಲ್ ಮೀಟ್ ಮುಖಾಂತರ, ಇಲ್ಲಿ ಭೌತಿಕವಾಗಿ ತೆಗೆದುಕೊಂಡ ತರಗತಿಗಳು ವಿಭಿನ್ನ ಅನುಭವ, ಶಿಕ್ಷಕನ ಮನಸ್ಥಿತಿಗೆ ಪರಿವರ್ತನೆ ಇತರೆ ಅಂಶಗಳನ್ನು ಹೊತ್ತು ತಂದವು. ಎಮ್.ಎ ಸೇರುವಾಗ ನನ್ನಲ್ಲಿ ಇತರೆ ಆಲೋಚನೆಗಳೇನು ಇರಲಿಲ್ಲ, ನನ್ನ ಯುಪಿಎಸ್ಸಿ ಪಠ್ಯವೇ ಇದೆಯೆಂದು ಸೇರಿ, ಈಗ ಕಾಲೇಜು ನಿಂತ ಮೇಲೆ ಮುಗಿಸಿದ ಎಮ್.ಎ ಗೆ ಒಂದು ಸಾರ್ಥಕ್ಯ ಬಂದಿದೆ ಎಂದು ಅನಿಸಿದೆ. ಇಲ್ಲಿ ನನ್ನೊಟ್ಟಿಗೆ ನಿಂತ ಎಲ್ಲರಿಗೂ ಧನ್ಯವಾದಗಳು.
ತುಂಬಾ ಚೆನ್ನಾಗಿ ಬರೆಯಲಾಗಿದೆ
ReplyDeleteಧನ್ಯವಾದಗಳು ಕವಿತಾ ಮೇಡಂ 🙏
Delete