ಪೆಟ್ರೋಲ್ ಬಂಕು

ಮೊನ್ನೆ ಪೆಟ್ರೋಲ್ ಹಾಕಿಸಲು ಇಲ್ಲೇ ಹತ್ತಿರದ ಬಂಕ್ ಒಂದಕ್ಕೆ ಹೋಗಿದ್ದೆ. ಮುಂದೊಂದು ದೋಭಿಯವನ ಗಾಡಿಯೂ ನಿಂತಿತ್ತು, ಆದರೆ ಬಂಕಿನಾತ ನನ್ನನ್ನು ನೋಡಿದ ಕೂಡಲೇ ಕರೆದು ಎಷ್ಟು ಪೆಟ್ರೋಲ್ ಬೇಕೆಂದು ಕೇಳಿ‌ ನಾನು ಹೇಳಿದಂತೆ, ೧೦೦ ರೂಪಾಯಿಗೆ ಹಾಕಿದ ನಂತರ ಮೋದಲೇ ನಿಂತು ಕಾದಿದ್ದ ದೋಭಿಯವನಿಗೆ ೪೦೦ ರೂಪಾಯಿಗಳ ಪೆಟ್ರೋಲ್ ಹಾಕಿ ಕಳಿಸಿದ.
          ಅರೇ, ಇದರಲ್ಲಿ ಏನು ವಿಶೇಷ ಅನ್ಕೊಂಡ್ರಾ? ಅಥವಾ ದೋಭಿಯವನನ್ನು ಬಿಟ್ಟು ನನ್ನ ಗಾಡಿಗೆ ಪೆಟ್ರೋಲ್ ಹಾಕಿದ್ದು‌ ಕೇಳಿ ನಾನೇನು ದೊಡ್ಡ ಮನುಷ್ಯ ಅಂದುಕೊಂಡ್ರಾ? ಅಲ್ಲೇ ಇರೋದು ಮಾತು...
          ಸಾಮಾನ್ಯವಾಗಿ ಪೆಟ್ರೋಲ್ ಬಂಕ್ ಗಳಲ್ಲಿ ಎರಡು ಬಗೆಯ ಮೋಸ ನಾನು ಗಮನಿಸಿದ್ದೀನಿ. ಬಂಕಿನವರ ಈ ಕರಾಮತ್ತುಗಳು ನನಗೆ ಚಂದ್ರಾಲೇಔಟಿಗೆ ಬಂದ ಹೊಸತರಲ್ಲೇ ತಿಳಿಯಿತು. ಒಂದನೆಯದು, ಈ ರೀತಿ ಕಡಿಮೆ ಪೆಟ್ರೋಲ್ ಬೇಕಿರೋರಿಗೆ ಮೊದಲು ಹಾಕಿ ನಂತರ ಮೀಟರ್ ಜೀರೋ ಮಾಡದೇ ನಾನು ಹಾಕಿಸಿದ ೧೦೦ ರೂಗಳ ಮೇಲೆ ೨೦೦,೩೦೦,೪೦೦ ಹಾಕಿ ತೋರಿಸೋದು, ಇಲ್ಲಿ ದೋಭಿಗೂ ಅದೇ ಆಗಿತ್ತು. 
‌          ಎರಡನೆಯದು, ಉದಾಹರಣೆಗೆ ನಾನು ಐದು ನೂರು ನೋಟು ಕೊಟ್ಟು ನೂರು ರೂಪಾಯಿಗೆ ಪೆಟ್ರೋಲ್ ಹಾಕಿಸಿದೆ ಅಂತಿಟ್ಟುಕೊಳ್ಳಿ. ಬಂಕಿನವರು ಎಂತಾ ಖಿಲಾಡಿ ವಿದ್ಯೆ ಕಲಿತಿರ್ತಾರೆ ಅಂದ್ರೆ, ನೂರರ ಮೂರು ನೋಟನ್ನೆ ನಾಲ್ಕು ಎನ್ನುವ ರೀತಿ ನಮ್ಮ ಕಣ್ಣ ಮುಂದೆ ತಂದು ಎಣಿಸುತ್ತಾರೆ. ನೀವೇನಾದರೂ ನೋಡಿದೆನಲ್ಲಾ ನಾಲ್ಕು ನೋಟಿದೆ ಅಂತಾ ಜೇಬಿಗಿಳಿಸಿದ್ರೆ, ನಿಮ್ಮ ನೂರು ರೂಪಾಯಿ ಅವನ ಹುಂಡಿಗೆ. ಅಕಸ್ಮಾತ್, ನೀವು ಚಾಲಾಕಿಯಾಗಿ ಹಣ ಎಣಿಸಲು ಮುಂದಾದರೆ, ಆ ಕಡೆ ಅವನೂ ಎಣಿಸೋಕೆ ಮುಂದಾಗಿ‌ ನಿಮ್ಮ ಕೈಗೆ ಐವತ್ತರ ಎರಡು ನೋಟು ಇಡ್ತಾನೆ.
          ಮೋಸ ಮಾಡ್ತಾರೆ ಅಂತ ಗೊತ್ತು ಆದ್ರೂ ಅದೇ ಬಂಕಿಗೆ ಹೋಗೋದು, ಅವರೆಷ್ಟೇ ಡಿಸ್ಟ್ರ್ಯಾಕ್ ಮಾಡಿದರೂ ಮೀಟರ್ ಬೋರ್ಡ್ ಬಿಟ್ಟು ಕಣ್ಣು ಹೊರಳಿಸದೇ ಇರೋದು... ಹೀಗೆ ಅವರ ಮೋಸ ಕಂಡು ಹಿಡಿಯೋದರಲ್ಲೇ ಏನೋ ಒಂದು ಮಜಾ ಇದೆ. ಇದೇ ರೀತಿ ಬೇರೆ ಅನುಭವ ನಿಮಗೇನಾದ್ರೂ ಆಗಿದ್ಯಾ?

Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಒಂದು ಅಲಾರಾಂನ ಕಥೆ

ನನಗಾಗಿ