ಇಂಡೋ-ಅಮೇರಿಕನ್ ಶಾಲೆ
ಕರ್ಣ ತುಂಬಾ ಬುದ್ಧಿವಂತ, ಚಾಣಾಕ್ಷ, ಮೇಧಾವಿ.
ಒಂದಿನ ಗೆಳೆಯರೊಡಗೂಡಿ ಅವರ ಮಕ್ಕಳಿದ್ದ ಬೆಂಗಳೂರಿನ ಇಂಡೋ-ಅಮೇರಿಕನ್ ಶಾಲೆಗೆ ಹೋಗ್ತಾನೆ. ಎಷ್ಟೇ ಆಗಲಿ ಅವನದು ಮೇಷ್ಟ್ರ ಬುದ್ಧಿ ಅಲ್ಲೇ ಇದ್ದ ಹುಡುಗನನ್ನ ಕರೆದ. ಕರೆದು ಮಾತನಾಡಿದ,
ಕರ್ಣ: ಏನಪ್ಪಾ, ಏನು ನಿನ್ನ ಹೆಸರು?!
ಹುಡುಗ: ಚಂದನ್
ಕರ್ಣ: ಹೇಗಿದೆ ಶಾಲೆ?! ಹೇಗಿದೆ ವಾತಾವರಣ?!
ಹುಡುಗ: ಶಾಲೆ ತುಂಬಾ ಚೆನ್ನಾಗಿದೆ, ಏನು ಬೇಕೋ ಎಲ್ಲಾ ಇದೆ. ಏನೂ ಕೊರತೆ ಇಲ್ಲ.
(ಹುಡುಗನ ಸ್ವಚ್ಚ ಕನ್ನಡ ಕೇಳಿ)
ಕರ್ಣ: ಯಾವ ಊರು ನಿಂದು?! ಅಪ್ಪ-ಅಮ್ಮ ಏನ್ಮಾಡ್ತಿದಾರೆ?!
ಹುಡುಗ: ಅವರು ಅಮೇರಿಕೆಯಲ್ಲಿದ್ದಾರೆ ದುಡಿಯುತ್ತಿದ್ದಾರೆ, ವರುಷಕ್ಕೊಮ್ಮೆ ಬರುತ್ತಾರೆ ನಾನೂ ಒಮ್ಮೆ ಹೋಗುತ್ತೇನೆ.
(ಸುಮ್ಮನಿರಲಾಗದ ಕರ್ಣ)
ಕರ್ಣ: ಮಗೂ, ನಿಮ್ಮ ತಂದೆ-ತಾಯಿಯ ಬಗ್ಗೆ ನಿನ್ನ ಅನಿಸಿಕೆ ಏನು?!
ಹುಡುಗ: ನಾನೂ ಜೀವನದಲ್ಲಿ ಒಂದು ಒಳ್ಳೆ ಕೆಲಸ ಹಿಡಿದು ಸಮಾಧಾನಕರ ಜೀವನ ನಡೆಸುವ ಸ್ಥಿತಿಗೆ ಬಂದ ಮೇಲೆ ಅವರನ್ನು ಇದೇ ಬೆಂಗಳೂರಿನ ವೃದ್ಧಾಶ್ರಮಕ್ಕೆ ಸೇರಿಸುತ್ತೇನೆ.
ಇಷ್ಟು ಹೇಳಿ ಹೊರಟು ಹುಡುಗ ಹೋದ, ಕರ್ಣ ಅಲ್ಲೇ ಅವಾಕ್ಕಾಗಿ ನಿಂತಿದ್ದ. ಯಾಂತ್ರಿಕ ಬದುಕಿನಲ್ಲಿ ಸಂಬಂಧಗಳ ಅಳಿವು ಅವನ ಮುಂದೆ ಉದಾಹರಣೆಯಾಗಿ ನಿಂತಿತ್ತು. ಹುಟ್ಟಿನಿಂದ ೧೮ ವರ್ಷದವರೆಗಿನ ಆ ಹುಡುಗನ ಆ ಬೋರ್ಡಿಂಗ್ ಶಾಲೆಯ ಜೀವನ ಈ ಹಂತ ತಲುಪಿಸಿತ್ತು. ಎಲ್ಲಾ ಇದ್ದೂ ಅನಾಥನಾಗಿ ಬೆಳೆದಿದ್ದ, ತನಗೆ ಕಷ್ಟ ಇದ್ದಾಗಲೋ, ಮನಸ್ಸು ಬೇಸರಗೊಂಡಾಗಲೋ, ಖುಷಿಗೊಂಡಾಗಲೋ ಹಂಚಿಕೊಳ್ಳಲೊಂದಷ್ಟು ಮನಸ್ಸುಗಳಿಲ್ಲದೆ ಅವನ ಮನಸ್ಸು ಕಲ್ಲಾಗಿತ್ತು.
ಅಂದಿನಿಂದ ಕರ್ಣ ಹೋದಲ್ಲಿ ಬಂದಲ್ಲಿ, ಅವಕಾಶ ಸಿಕ್ಕಾಗಲೆಲ್ಲಾ ಈ ಸಂಗತಿ ಪ್ರಸ್ತಾಪ ಮಾಡಿ ಜನರಿಗೆ ತಿಳಿಹೇಳುತ್ತಿದ್ದ ಮಕ್ಕಳ ಮನಸ್ಸನ್ನು ಪ್ರೀತಿಯಿಂದ ತುಂಬುವಂತೆ ಕೇಳಿಕೊಳ್ಳುತ್ತಿದ್ದ. ಮನಸ್ಸು ಶುಭ್ರವಾಗಿದ್ದು ಒಳ್ಳೆಯ ರೀತಿಯಲ್ಲಿ ಬದುಕಲು ಇಂಜಿನಿಯರ್, ಡಾಕ್ಟರ್ ಗಳೇ ಆಗಬೇಕಿಲ್ಲ. ಯಶವಂತಪುರದಲ್ಲಿ ಮೂಟೆ ಹೊರುವವನು ಬಾಳುತ್ತಿದ್ದಾನೆ, ಅವನ ಬಾಳು ಎಂದಿಗೂ ಕೀಳಲ್ಲ, ಸಂಬಂಧಗಳನ್ನು ಕಳೆಯುವ ಆ ಬದುಕಿಗಿಂತ ಈ ಸಂತೃಪ್ತ ಜೀವನವೇ ಸಾವಿರ ಪಟ್ಟು ಮೇಲು.
Comments
Post a Comment