ಕುಂತಿಬೆಟ್ಟ - ಒಂದು ರಾತ್ರಿ
ಎಕ್ಸಾಮ್ ಮುಗೀತು, ಕಾಲೇಜು ಮುಗೀತು, ಇನ್ನೇನು ಪ್ರಾಜೆಕ್ಟ್ ಸಬ್ಮಿಷನ್ ಆದ್ರೆ ಮೈಸೂರಿನ ಜೊತೆ ೪ ವರ್ಷದ ಸಂಬಂಧನೂ ಮುಗಿಯತ್ತೆ. ಈ ಎಂಜಿನಿಯರಿಂಗ್ ಲೈಫ್ ಅಲ್ಲಿ ಏನು ಇಷ್ಟ ಆಗದಿದ್ರೂ ಹಾಸ್ಟೆಲ್ ಲೈಫ್ ಮಾತ್ರ ಜೀವನಪರ್ಯಂತ ಮರೆಯೋಕಾಗಲ್ಲ. ಅಂತಾ ಸಿಹಿ-ಕಹಿ ನೆನಪುಗಳನ್ನು ಕೊಟ್ಟಿದೆ. ಓಕೆ ಈಗ ಮ್ಯಾಟ್ರಿಗೆ ಬರೋಣ, ೨೫ ಮೇ ೨೦೧೭ ಗುರುವಾರ ಹಾಸ್ಟೆಲ್ ಅಲ್ಲಿ ಏನ್ ಕೆಲ್ಸಾನೂ ಇಲ್ಲ ಮಾಡಕೆ ಎಲ್ಲಾದ್ರೂ ಹೋಗಣ ಅಂತ ಮಾತಾಡ್ಕೊಂಡು ಕುಂತಿಬೆಟ್ಟಕ್ಕೆ ಹೊರಟ್ವಿ ರಾತ್ರಿ ೧೦:೦೦ ಗಂಟೆ ಸುಮಾರಿಗೆ.
ಬೆಳಗಿನ ಸುಂದರ ನೋಟ ಕುಂತಿ ಬೆಟ್ಟದಿಂದ
ನಮ್ಮ ಚಾರಣದ ಬಗ್ಗೆ ಹೇಳುವ ಮುನ್ನ ಕುಂತಿ ಬೆಟ್ಟದ ಬಗ್ಗೆ ಮಾಹಿತಿ ನೀಡಲೇಬೆಕು. ಪಾಂಡವಪುರಕ್ಕೆ ಹಿಂದೆ ಹಿರೋಡೆ ಎಂದು ಹೆಸರಿತ್ತು. ಪಾಂಡವರು ತಮ್ಮ ವನವಾಸದ ಕಾಲದಲ್ಲಿ ಇಲ್ಲಿ ನೆಲೆಸಿದ್ದರು ಎಂಬ ಹಿನ್ನೆಲೆಯಲ್ಲಿ ಈ ಬೆಟ್ಟಕ್ಕೆ ಕುಂತಿಬೆಟ್ಟ ಎಂಬ ಹೆಸರು ಬಂದಿದೆ. ಇಲ್ಲಿ ಭೀಮನು ಬಕಾಸುರನನ್ನು ವಧೆ ಮಾಡಿದನೆಂದು ನಂಬಿಕೆ ಇದೆ. ಎರಡು ಬೆಟ್ಟಗಳು ಬೇರ್ಪಟ್ಟು ಒಂದು ಬೆಟ್ಟದಲ್ಲಿ ಕುಂತಿಕೊಳ ಇದ್ದರೆ ಮತ್ತೊಂದು ಬೆಟ್ಟದಲ್ಲಿ ಕುಂತಿ ಒನಕೆಯನ್ನು ಕಾಣಬಹುದು. ಈ ಬೆಟ್ಟದ ತಪ್ಪಲಲ್ಲಿ ಹೈದರ್ ಮತ್ತು ಟಿಪ್ಪುಕಾಲದಲ್ಲಿ ಪ್ರೆಂಚ್ ಸೈನ್ಯ ಬೀಡು ಬಿಟ್ಟಿದ್ದ ಕಾರಣ ಪ್ರೆಂಚ್ರಾಕ್ಸ್ಎಂದೂ ಹೆಸರಾಗಿತ್ತು.
ಶ್ರೀರಂಗಪಟ್ಟಣ-ಪಾಂಡವಪುರ ಹಾದಿಯಲ್ಲಿ ಒಂದು ಫೋಟೊ
ಅಷ್ಟಾಗಿ ಹಿನ್ನೆಲೆ ಹೇಳಲೂ ಅರ್ಥೈಸಿಕೊಳ್ಳಲೂ ನನಗೂ ಸಾಧ್ಯವಿಲ್ಲ ಯಾಕಂದ್ರೆ ಒಬ್ಬೊಬ್ರು ಒಂದೊಂದು ಥರ ಹೇಳ್ತಾರೆ ಹೋಗ್ಲಿ ಅದು ಬಿಡಿ. ನಾವು ಹಾಸ್ಟೆಲ್ ಇಂದ ರಾತ್ರಿ ಅಲ್ಲೇ ಸ್ಟೇ ಮಾಡದಿದ್ದರೆ ಅಂತ ಹೊರಟ್ವಿ. ಫ್ರೆಂಡ್ (ಫಿಷ್) ನ ಬರ್ತಡೇ ಸೆಲೆಬ್ರೇಷನ್ ಕೂಡ ಅಲ್ಲೇ ಮಾಡಣ ಅಂತ ಆಯ್ತು. ನನ್ ರೂಮ್ ಮೇಟ್ ಮತ್ತಿಬ್ರು ಫ್ರೆಂಡ್ಸ್ ಹೋಗಿ ಮುಂದೆ ಎಲ್ಲಾ ತಗೊಂಡಿದ್ರು. ಕೊಲಂಬಿಯಾ ಏಷಿಯಾ ಆಸ್ಪತ್ರೆ ಹತ್ರ ಅವರ್ನ ಕೂಡ್ಕೊಂಡು ಹೊರಟ್ವಿ. ೧೬ ಜನ ೮ ಬೈಕ್ ಅಲ್ಲಿ.
ಬೆಟ್ಟದ ತಪ್ಪಲಿನಲ್ಲಿರುವ ದೇವಸ್ಥಾನ - ಮಂಟಪಗಳು-ಕೊಳ
ಕುಂತಿ ಬೆಟ್ಟ ಮೈಸೂರಿಂದ ಸುಮಾರು ಮೂವತ್ತೈದು ಕಿಲೋಮೀಟರ್ ಇದೆ. ಶ್ರೀರಂಗಪಟ್ಟಣದ ಮಾರ್ಗವಾಗಿ ನಾವು ಹೋಗಿದ್ದು. ಪಾಂಡವಪುರ ರೈಲ್ವೇಸ್ಟೇಷನ್ ಅಲ್ಲಿ ಕುಡಿಯಕೆ ನೀರು ತಿನ್ನಕೆ ಬಿಸ್ಕತ್ತು, ಉಪ್ಪಿನಕಾಯಿ, ಮತ್ತೆ ಬೇರೆಲ್ಲಾ ಅರೇಂಜ್ಮೆಂಟ್ಸ್ ಮಾಡ್ಕೊಂಡು ಬೆಟ್ಟದ ಕಡೆ ಹೊರಟ್ವಿ. ಕಾಚೇನಹಳ್ಳಿ ಅನ್ನೋ ಊರಲ್ಲಿ ಲೆಫ್ಟ್ ಟರ್ನ್ ತಗೊಂಡ್ರೆ ಅಲ್ಲಿಂದ ಒಂದೆರಡು ಕಿಮೀ ದೂರ ಅಷ್ಟೇ.
ರಾತ್ರಿ ನಾವು ಹಾಕಿದ ಕ್ಯಾಂಪ್ ಫೈರ್
ಅಲ್ಲಿದ್ದ ಮಂಟಪದ ಹತ್ರ ಬೈಕ್ ಗಳನ್ನ ನಿಲ್ಸಿ. ಹತ್ತೋಕೆ ಸ್ಟಾರ್ಟ್ ಮಾಡಿದ್ವಿ. ಆ ಕತ್ತಲಲ್ಲಿ ಅದೆಂಗೆ ಹತ್ತಿದ್ವೋ ಗೊತ್ತಿಲ್ಲ ಹಿಂದೊಂದ್ ಸಲ ಬಂದಾಗ ಹತ್ತಕೆ ಪರದಾಡಿದ್ದೆ. ಮೇಲೆ ಕಲ್ಲಿನ ಒಂದು ಒನಕೆ ಇದೆ ಆದ್ರೆ ಅದು ಈ ಸಲ ನೋಡುವಾಗ ಮುರಿದು ಬಿದ್ದಿತ್ತು. ಛೇ!! ಇತಿಹಾಸದಲ್ಲಿದ್ದ ಒನಕೆ ಮುರ್ದಿದ್ ಕಂಡು ಬೇಜಾರಾಯ್ತು. ಫ್ರೆಂಡ್ ಬರ್ತಡೇ ಸೆಲೆಬ್ರೇಟ್ ಮಾಡಿ ಕೇಕ್ ತಿಂದು ತಂಪಾದ ಗಾಳಿ ಸವೀತಾ ಸ್ವಲ್ಪ ಬಾಡಿನ ಹೀಟ್ ಮಾಡಿದ್ವಿ. ಕ್ಯಾಂಪ್ ಫೈರ್ ಹಾಕೋಕೆ ಕಟ್ಟಿಗೆ ಕಡ್ಡಿ ಎಲ್ಲಾ ಆಯ್ಕೊಂಡು ತಂದು ಬೆಂಕಿ ಹಾಕಿ, ಹಾಡು ಹಾಕ್ಕೊಂಡು ಕುಣಿದು ಮಜಾ ಇತ್ತು. ಫ್ರೆಂಡ್ ತಂದಿದ್ ಕಾರ್ಡ್ಸ್ ಅಲ್ಲಿ ಬರ್ದೇ ಇರೋ ರಮ್ಮೀ ಆಟನ ಚೂರು ಪಾರು ಕಲ್ತಿದ್ದೂ ಆಯ್ತು. ಇಷ್ಟೆಲ್ಲಾ ಮಾಡೋ ಹೊತ್ತಿಗೆ ಟೈಮ್ ಬೆಳಗಿನ ಜಾವ ೪:೦೦ ಗಂಟೆ ಆಗಿತ್ತು. ಮಲಗೋಣ ಅಂತ ಅಲ್ಲೇ ಒಂದ್ಕಡೆ ಬಿದ್ಕೊಂಡೆ ಆ ಚಳಿಗೆ ನಿದ್ದೆ ಎಲ್ಲಿಂದ ಬರ್ಬೇಕು?! ೫ ಕ್ಕೆ ಮತ್ತೆ ಎದ್ದೆ ಬೆಳಕು ಮೂಡ್ತಾ ಇತ್ತು. ಸನ್ ರೈಜ್ ನೋಡ್ಕೊಂಡು ಹೋಗಕೆ ಲೇಟ್ ಆಗತ್ತೆ ಅಂತ ೬:೩೦ ಹಂಗೆ ಅಲ್ಲಿಂದ ಇಳಿಯಕೆ ಸ್ಟಾರ್ಟ್ ಮಾಡಿದ್ವಿ.
ನಾವು ಹೋದ ಮಾರ್ಗ (ಕೃಪೆ: ಗೂಗಲ್ ಮ್ಯಾಪ್ಸ್)
ಈ ಸಲ ಬೆಟ್ಟ ಹತ್ತಿ ಇಳಿಯೋ ದಾರಿ ಬಿಟ್ಟು ನೀಟಾಗಿ ರಸ್ತೆ ಇರೋ ಕಡೆಯಿಂದ ಇಳ್ದು ಬೈಕ್ ಹತ್ರ ಫೋಟೋ ಕ್ಲಿಕ್ಕಿಸ್ಕೊಂಡು ಸೀದಾ ಮೈಸೂರು ಕಡೆ ಹೊರಟ್ವಿ. ಪಾಂಡವಪುರದಲ್ಲಿ ನಿಲ್ಸಿ ಟೀ ಕುಡ್ದು, ಅಲ್ಲಿಂದ ಸುಮಾರು ೯:೦೦ ಅಷ್ಟರಲ್ಲಿ ಹಾಸ್ಟ್ಲಿಗೆ ಬಂದು ಎಲ್ಲಾ ನಿತ್ಯ ಕರ್ಮ ಮುಗ್ಸಿ ಮಾಡಿದ್ ಚಿತ್ರಾನ್ನ ತಿಂದು ಮಲಗಿ, ಎದ್ದಿದ್ದು ಮಧ್ಯಾಹ್ನ ೨:೦೦ ಗಂಟೆಗೆ ಊಟಕ್ಕೆ.
ಬೆಟ್ಟದಿಂದ ಒಂದು ವಿಹಂಗಮ ನೋಟ
ಅಂತೂ ಹಾಸ್ಟೆಲ್ ಫ್ರೆಂಡ್ಸ್ ಎಲ್ಲಾ ಹೋಗಿದ್ ಟ್ರಿಪ್ಪು ಒಂದು ಸಿಹಿ ನೆನಪಾಗಿ ಉಳೀತು, ಇನ್ನು ಸ್ವಲ್ಪ ದಿನದಲ್ಲೇ ಎಲ್ಲಾ ತಮ್ಮ ಜೀವನದಲ್ಲಿ ಕಳೆದ್ಹೋಗೊ ಮುನ್ನ ಕೊನೆಯ ಈ ಅನುಭವ ಒಂದು ಅಮೂಲ್ಯ ರತ್ನ. ಇದಕ್ಕೆ ಕಾರಣರಾದ ಎಲ್ಲರಿಗೂ ಆ ಕುಂತಿಬೆಟ್ಟಕ್ಕೂ, ಆ ಕತ್ತಲಿಗೂ (ಇನ್ನೊಂದು ಆವತ್ತು ಅಮವಾಸ್ಯೆ, ದಾರಿ ಮೇಲೆ ಒಬ್ರು ಇವತ್ತು ಅಮವಾಸ್ಯೆ ಹುಷಾರಾಗಿ ಹೋಗಿ ಬನ್ನಿ ಅಂದಿದ್ರೂ ಕೂಡ), ಈ ಮೈಸೂರಿಗೂ, ಕಾಲೇಜು-ಹಾಸ್ಟೆಲ್ಲಿಗೂ ನನ್ನ ಸಾಷ್ಟಾಂಗ ನಮನಗಳು.
Comments
Post a Comment