ರಾಜಕೀಯ ಬಿಕ್ಕಟ್ಟು
ನಮ್ಮದೊಂದು ಪ್ರಜಾಪ್ರಭುತ್ವ ರಾಷ್ಟ್ರ. ಇಲ್ಲಿ ಎಲ್ಲವೂ ಪ್ರಜೆಯ ಆಯ್ಕೆಯಂತೆಯೇ ನಡೆಯಬೇಕು. ಆದರೆ ಇದು ವಾಸ್ತವವಾಗುವುದು ಮಾತ್ರ ಕೆಲವೊಮ್ಮೆ. ಹಲವು ಬಾರಿ ಆಯ್ಕೆ ಮಾಡುವಲ್ಲಿಗೆ ಅಂತ್ಯವಾಗುವ ಮತದಾರನ ಅಧಿಕಾರ. ಇದಕ್ಕೆ ಸಾಕ್ಷಿ ಪ್ರಸ್ತುತ ನಡೆಯುತ್ತಿರುವ ರಾಜಕೀಯ ಬಿಕ್ಕಟ್ಟುಗಳು.
ಸದಾ ಆರೋಪ ಪ್ರತ್ಯಾರೋಪ, ದಬ್ಬಾಳಿಕೆ, ಭ್ರಷ್ಟಾಚಾರ, ಹಗರಣ, ಅಧಿಕಾರ ದುರ್ಬಳಕೆ ಮತ್ತು ಇನ್ನಿತರೆ ಹತ್ತು ಹಲವು ಆಯಾಮಗಳೇ ನಮ್ಮ ಸದ್ಯದ ರಾಜಕೀಯ ಕಾರ್ಯವೈಖರಿಯ ಸಾಧನಗಳು. ಬೇಡದಿರುವ ಯೋಜನೆಗಳು, ಉಪಯುಕ್ತ ಯೋಜನೆಗಳ ಮೂಲೆಗುಂಪು, ನೆಪಮಾತ್ರದ ಅಧಿವೇಶನಗಳು, ಅಭಿವೃದ್ಧಿಗಿಂತ ಪ್ರಕೃತಿ ನಾಶಕ್ಕೆ ಒತ್ತು ಹಾಗಂತ ಆಡಳಿತ ಪಕ್ಷಗಳೇ ಹೊಣೆಯಾಗಬೇಕಿಲ್ಲ. ಪರೋಕ್ಷವಾಗಿ ಇತರ ಪಕ್ಷಗಳು ಸಮಸ್ತ ನಾಗರಿಕರು ಸಮಾನ ಹೊಣೆಗಾರರು.
ರಾಜಕೀಯ ಬಿಕ್ಕಟ್ಟು ಒಂದು ರೀತಿ ಭಾರತದ ಸಂವಿಧಾನಕ್ಕೇ ಅಪಮಾನ ಇದ್ದಂತೆ. ವಿಶ್ವದಲ್ಲೇ ಅತೀ ದೊಡ್ಡ ಸಂವಿಧಾನ ಇದಾಗಿದ್ದು ಅಂತಹ ಸಂವಿಧಾನವನ್ನೂ ಮೀರುವಂತೆ ನಮ್ಮ ಕೆಲವು ಚುನಾಯಿತ ರಾಜಕಾರಣಿಗಳು ಕೆಲವೊಮ್ಮೆ ವರ್ತಿಸಿಬಿಡುತ್ತಾರೆ. ಉದಾಹರಣೆಗೆ ಉತ್ತರ ಪ್ರದೇಶದಲ್ಲಿನ ತಂದೆ ಮಗನ ನಡುವಿನ ರಾಜಕೀಯ ಬಿಕ್ಕಟ್ಟು ಮತ್ತು ಪಕ್ಕದ ತಮಿಳುನಾಡಿನ ಇತ್ತೀಚಿನ ಬೆಳವಣಿಗೆಗಳು. ಪ್ರಜೆಗಳು, ಯಾರಲ್ಲಿದೆ ಅಧಿಕಾರ ಎಂಬ ವಿಷಯ ಅರಿಯದೆ ಕಂಗಾಲಾಗುತ್ತಾರೆ. ಪರಸ್ಪರ ಉಚ್ಛಾಟನೆ -ಬೀದಿ ರಂಪಾಟಗಳೊಂದಿಗೆ ಓಟಿಗನ ಮೇಲೆ ಎಳ್ಳು ನೀರು ಬಿಟ್ಟಂತಾಗುತ್ತದೆ. ಕೊನೆಗೆ ಜನ ಎಣಿಸಿದ್ದೇ ಒಂದು ಆಗುವುದೇ ಒಂದು ಆಗಿ ಹೋಗುತ್ತದೆ.
ಇಂತಹ ಲೋಪದೋಷಗಳಿಗೆ ಬಲವಾದ ಕಾನೂನೊಂದು ಬೇಕಾಗಿದೆ. ಜನಪ್ರತಿನಿಧಿಗಳು ಜನರೊಂದಿಗೆ ಬೆರೆತು ಅವರ ಅನಿಸಿಕೆ ಪಡೆಯಬೇಕಿದೆ. ಮಹಾನಗರಗಳ ಬಿಟ್ಟು ತಮ್ಮ ಕ್ಷೇತ್ರಗಳ ಮತದಾರರ ಮನದ ತೊಳಲಾಟ ಅರಿಯಬೇಕಿದೆ.
Comments
Post a Comment