ಕನ್ನಡಿಗನ ಮನವಿ



ಸಾಂಧರ್ಭಿಕ ಚಿತ್ರ
ಈಗೊಂದು ತಿಂಗಳ ಕೆಳಗೆ ನಮಗೆ ರಜೆ ಇದ್ದ ಸಂದರ್ಭ ಎಂದೆಣಿಸುತ್ತೇನೆ. ಮನೆಯಲ್ಲಿದ್ದ ನನ್ನನ್ನು ದೊಡ್ಡಪ್ಪ ಕರೆದರು. ನಾನು ಅವರೊಂದಿಗೆ ಪಕ್ಕದೂರಿಗೆ ಬ್ಯಾಂಕಿಗೆ ಹೋಗಬೇಕಾಗಿ ಬಂತು, ಸರಿ ಹೊರಟೆ. ತಕ್ಕ ಮಟ್ಟಿಗೆ ಓದಿದವರೇ, ಆಗಿನ ಕಾಲಕ್ಕೆ ಐದು-ಆರನೇ ತರಗತಿ ಹೆಚ್ಚಲ್ಲವೇ?! ಆದರೆ ಸಮಸ್ಯೆ ಅದಲ್ಲ ಬ್ಯಾಂಕಿನ ಚೀಟಿಗಳಲ್ಲಿರುವ ಭಾಷೆ ಅರ್ಥ ಮಾಡಿಕೊಳ್ಳಲಾಗದ ಸ್ಥಿತಿ. ಓಕೆ ಆ ಸಂದರ್ಭದಲ್ಲಿ ನಾನವರಿಗೆ ನೆರವಾದೆ. ವಾಪಾಸು ಬರಲು ಅಣಿಯಾಗುವಾಗ "ತಮ್ಮಾ, ಇದೊಂಚೂರು ಏನು ನೋಡ್ತೀಯಾ?!" ಶಬ್ದ, ತಿರುಗಿ ನೋಡಿದೆ. ೫೦-೫೫ ವರ್ಷದವ ಮಗನಿಗೆ ಹಣ ತುಂಬಲು ಚಲನ್ ಬರೆಯಬೇಕಿತ್ತು, ಆಯ್ತು ಬರೆದುಕೊಟ್ಟೆ. ಸುತ್ತಲೂ ನೋಡಿದೆ ಅಲ್ಲಲ್ಲಿ ಅದೇ ವಾತಾವರಣ. ಇನ್ನೇನು ಮನೆ ಕಡೆಗೆ ಹೊರಟೆ, ಮಿರ್ಚಿ-ಮಂಡಕ್ಕಿ ತಿಂದು.

           ಸುಮ್ನೆ ಉದಾಹರಣೆಗೆ ಇರ್ಲಿ ಅಂತ ಹೇಳ್ದೆ ಅಷ್ಟೇ.  ಇದೇ ಪರಿಸ್ಥಿತಿ ರೈಲ್ವೇ, ಅಂಚೆ ಕಛೇರಿ, ಗ್ಯಾಸ್ ಸಿಲಿಂಡರ್, ಪಾಸ್ ಪೋರ್ಟ್, ಇತ್ಯಾದಿ ಎಲ್ಲೆಡೆ ಸರ್ವೇ ಸಾಮಾನ್ಯ. ಕುಮುದೇಂದು ಮುನಿ' ರಚಿಸಿದ 'ಸಿರಿ ಭೂವಲಯ' ಎಂಬಲ್ಲಿ, ಸೊನ್ನೆಯಿಂದಲೇ ಎಲ್ಲಾ ಅಂಕೆಗಳನ್ನು ಮತ್ತು ಅಕ್ಷರಗಳನ್ನು ಸೃಷ್ಟಿಸಲಾಯಿತು ಮತ್ತು ಕನ್ನಡ ಭಾಷೆಗೆ ವಿಶ್ವದ ಎಲ್ಲಾ ಭಾಷೆಗಳನ್ನು ಅಡಗಿಸಿಕೊಳ್ಳುವ ಶಕ್ತಿ ಇದೆಯೆಂದು 'ಕುಮುದೇಂದು ಮುನಿ' ತನ್ನ ಗ್ರಂಥದಲ್ಲಿ ಸಾಬೀತುಪಡಿಸಿದ್ದಾರೆ. ಆದಿ ತೀರ್ಥಂಕರ ವೃಷಭದೇವನು ತನ್ನ ಕುಮಾರಿಯಾದ ಬ್ರಾಹ್ಮೀ ಸುಂದರಿಯರಿಗೆ ಕನ್ನಡ ಅಂಕಾಕ್ಷರಗಳನ್ನು ವಿವರಿಸಿದ ಕಾರಣದಿಂದಾಗಿ ಈ ಅಕ್ಷರ ಲಿಪಿಗೆ 'ಬ್ರಾಹ್ಮೀಲಿಪಿ' ಎಂದು ಅಂಕಲಿಪಿಗೆ 'ಸುಂದರಿ ಲಿಪಿ' ಎಂದು ಹೆಸರಾಗಿದೆ. ಈ ವಿಷಯವನ್ನು ಸಿರಿ ಭೂವಲಯವು ಬಹಳ ಸ್ಪಷ್ಟವಾಗಿ ತಿಳಿಸಿದೆ.

           ನಾನು ಗಮನಿಸಿದಂತೆ ನಮ್ಮ ಹಿರಿಕರು ಕನ್ನಡವನ್ನು ಚೆನ್ನಾಗಿ ಬಲ್ಲವರು. ಇದೇ ಪ್ರದೇಶದಲ್ಲಿ ಭಾರತ ಸ್ವತಂತ್ರವಾಗುವ ಮುನ್ನವೇ,  ಬ್ರಿಟಿಷರು-ಪೋರ್ಚುಗೀಸರು-ಡಚ್ಚರು ಬರುವ ಮುನ್ನವೇ, ಸಹಸ್ರ ವರ್ಷಗಳ ಹಿಂದಿನಿಂದಲೂ ಪ್ರಾಮುಖ್ಯತೆ ಹೊಂದಿದ್ದ ಒಂದು ಭಾಷೆಗೆ ಈಗ ಬೆಲೆ ಇಲ್ಲದಂತಾಗುತ್ತಿದೆ. ಅದು ಬಿಡಿ, ನಮ್ಮ ತಂದೆ-ತಾಯಿಯರು ಕರ್ನಾಟಕದಲ್ಲಿ ಕನ್ನಡ ತಿಳಿದೂ ಅನಕ್ಷರಸ್ಥರಾಗಿದ್ದಾರೆ. ಗುಲಾಮರಂತೆ ಇನ್ನೊಬ್ಬರ ಸಹಾಯ ಕೇಳುವ ಸ್ಥಿತಿ ಅವರದ್ದಾಗಿದೆ. ಹಾಗಂತ ಬೇರೆ ಯಾವ ಭಾಷೆಯೂ ಬೇಡವೆಂಬ ತರ್ಕ ನನ್ನದಲ್ಲ.

         ಇದನ್ನು ನನ್ನ ಭಾಷೆಯೊಂದರ ಪರಿಸ್ಥಿತಿ ಎಂದೂ ಹೇಳುತ್ತಿಲ್ಲ.  ಸುತ್ತಲಿನ ಮರಾಠಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷಿಕರಲ್ಲೂ ಇದೇ ಸಮಸ್ಯೆ ಇದ್ದಿರಬಹುದು. ಇದರ ಬಗ್ಗೆ ನಮ್ಮ ಘನ ಭಾರತ ಮತ್ತು ರಾಜ್ಯ ಸರ್ಕಾರಗಳು ಯೋಚಿಸಿ, ಒತ್ತು ನೀಡಿ, ಭಾಷೆಗಳು ಕತ್ತಲ ಕೌದಿಗೆಗೆ ಸರಿಯುವ ಮುನ್ನ ಗಟ್ಟಿಗೊಳಿಸುವ ಪ್ರಯತ್ನ ಮಾಡಬೇಕಾಗಿದೆ.



Comments

Popular posts from this blog

ತೊಣ್ಣೂರು ಕೆರೆಯ ಗೆಳೆತನ

ಪರೀಕ್ಷೆ

ಒಂದು ಅಲಾರಾಂನ ಕಥೆ